ಗೆಳತಿ ಯಾರಿಗಾಗಿ ಈ ನಿರೀಕ್ಷೆ? ಅಬ್ಬಾ…ಏನಿದು ಪ್ರೇಮ ನಿವೇದನೆ? ನೀವೂ ಓದಿ…ನಿಮ್ಮವರಿಗೂ ಕಳುಹಿಸಿ
ಗೆಳತಿ ಯಾರಿಗಾಗಿ ಈ ನಿರೀಕ್ಷೆ? ಹೊರಹೊಮ್ಮಿಸಲಾಗದ ಭಾವನೆಗಳ ಹೊತ್ತ ಹೃದಯ, ಕಾತರ ತುಂಬಿದ ಕಂಗಳಿಂದ ಏನು ಈ ಆಕಾಂಕ್ಷೆ, ತುಟಿಯಂಚಿನಲ್ಲಿ ಮಿಂಚಿ ಮಾಯವಾಗುವ ಆ ನಿನ್ನ ನಗು ನನ್ನ ನೆನಪಿನಿಂದಲೇ ಅಲ್ಲವೆ ?
ಮೋಡಗಳು ಒಂದಕ್ಕೊಂದು ಬಡಿದು , ಸಿಡಿಲಿನ ಬಡೆತ ಭೂಮಿಗೆ ಅಪ್ಪಳಿಸುತ್ತಿದ್ದರೂ ಯಾವುದನ್ನೂ ಲೆಕ್ಕಿಸದೇ ನಿನ್ನ ನಿರೀಕ್ಷೆಯಲ್ಲಿಯೇ ಇರುವಾಗ ನಾನು ಹೀಗೆ ವರ್ಣನೆ ಮಾಡುತ್ತಿದ್ದುದು ಈಗ ಬರೀ ನೆನಪು ಮಾತ್ರ.
ನಮ್ಮಿಬ್ಬರ ನೋಟಗಳು ಒಂದಾದ ಆ ಮೊದಲ ಕ್ಷಣ, ಇಬ್ಬರು ಭಾವನೆಗಳನ್ನು ಹಂಚಿಕೊಂಡ ಆ ಮೊದಲ ಗಳಿಗೆಯ ನೆನಪುಗಳು ಇವತ್ತಿಗೂ ನನ್ನನ್ನು ನಿದ್ರೆಯಿಂದ ಬಡಿದೆಬ್ಬಿಸುತ್ತಿವೆ. ಆಗ ತಾನೇ ಅರಳುತ್ತಿರುವ ಮಲ್ಲಿಗೆಯ ಮೊಗ್ಗಿನ ಮೇಲೆ ತುಂತುರು ಹನಿಗಳ ಸಿಂಚನವಾಗುತ್ತಿರುವಾಗ, ಮುಂಜಾನೆಯ ತಳಿಯಲ್ಲಿ ಮಗ್ನಳಾಗಿ ರಂಗವಲ್ಲಿಯ ಬಿಡಿಸುವ ನಿನ್ನ ಆ ಸುಂದರವಾದ ದೃಶ್ಯ ಇವತ್ತಿಗೂ ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದೆ.
ನಮ್ಮಿಬ್ಬರ ಪ್ರೇಮ ಕಥನಕ್ಕೆ ಸಾಕ್ಷಿಯಾದ ಭೀಮಾತೀರದ ಮೇಲೆ ಕಥನದ ಪ್ರತಿ ನೆನಪುಗಳು ಕಣ್ಣಿಗೆ ಕಾಣಿಸಲಾರದಷ್ಟು ಸೂಕ್ಷ್ಮವಾದ ಅಕ್ಷರಗಳಿಂದ ಕೆತ್ತಿದೆವಾದರೂ ಪ್ರತಿ ವರ್ಷ ಬರುವ ಪ್ರವಾಹದಿಂದ ಅಕ್ಷರಗಳ ಮೇಲೆ ಕೆಸರು ಮೆತ್ತಿ ಕೊಂಡರೂ ನೆನಪುಗಳು ಮಾತ್ರ ಹಾಗೆಯೆ ಉಳಿದಿವೆ. ನಮ್ಮಷ್ಟು ಸುಖಿಗಳು ಈ ಪ್ರಪಂಚದಲ್ಲಿ ಯಾರೂ ಇಲ್ಲ ಎಂದು ಒಬ್ಬರಿಗೊಬ್ಬರು ಎಷ್ಟೋ ಬಾರಿ ಹೇಳಿಕೊಂಡದ್ದೆವು. ಆ ಸುಖ ಸಂತೋಷ ಒಂದೇ ದಿನದಲ್ಲಿ ಕೊಚ್ಚಿಕೊಂಡು ಹೋಗುತ್ತದೆಂದು ನಾನು ಭಾವಿಸಿರಲಿಲ್ಲ. ಪ್ರೇಮಕ್ಕೆ ಸಾವಿಲ್ಲವೆಂದು ನೀನು ಯಾವಾಗಲೂ ಹೇಳುತ್ತಿದ್ದೆ. ನನಗೆ ಆಮೇಲೆ ಗೊತ್ತಾಯಿತು ನೀನು ಹೇಳಿದ್ದೆಲ್ಲಾ ಸುಳ್ಳು ಎಂದು. ಇಂದು ನನ್ನದು, ನಾಳೆ ಇನ್ಯಾರದೋ ಎಂಬ ಮಾತೇ ಸತ್ಯವಾಯಿತು.
ಈಗ ನನ್ನಲ್ಲಿರುವುದು ನಿನ್ನ ಹೊರತಾದ ನೆನಪುಗಳು ಮಾತ್ರ. ನನ್ನ ಹೃದಯವನ್ನು ಪ್ರವೇಶಿಸಿದ ಆ ದಿನ ನನ್ನ ಹೃದಯದಲ್ಲಿರುವ ರಕ್ತ ಮಾಂಸವೆಲ್ಲ ಖಾಲಿಯಾಗಿ ನಿನಗೆ ಮಾತ್ರ ಜಾಗ ಕೊಟ್ಟೆ. ಈಗ ಅಲ್ಲಿ ನೀನಿಲ್ಲ, ಬದಲಾಗಿ ನಿನ್ನ ನೆನಪುಗಳಿವೆ. ಹೃಯದೊಳಗೆ ನೀನು ಓಡಾಡಿದ ಹೆಜ್ಜೆಯ ಗುರುತುಗಳಿವೆ. ನೀನು ನನ್ನೊಂದಿಗೆ ಹಂಚಿಕೊಂಡ ಭಾವನೆಗಳ ಸ್ಪಂದನವಿದೆ. ನಾನು ಹುಟ್ಟಿದಾಗ ಇಟ್ಟ ಆ ಮೊದಲ ಹೆಜ್ಜೆ , ನಿನ್ನ ಹೆಸರೇ ಕೂಗಿರಬಹುದೇನೋ…ನಿನ್ನ ದನಿಯನ್ನೇ ಅನುಕರಿಸಿರಬಹುದೇನೋ ನನ್ನ ಕಾಲಿನ ಗೆಜ್ಜೆ ಎಂದು ಅದೆಷ್ಟೋ ಬಾರಿ ನಾನು ಕಲ್ಪಿಸಿಕೊಳ್ಳುತ್ತಿದ್ದೆ. ಇವತ್ತಿನವರೆಗೂ ಯಾರು ನಕ್ಕರು ನೀನೇ ನಕ್ಕಹಾಗೆ ಅನಿಸುತ್ತಿದೆ. ಇಷ್ಟು ಬೇಗ ನಮ್ಮ ಪ್ರೇಮದ ಮಾತು ಮೌನವಾಗುತ್ತದೆಂದು ನಾನು ಕನಸಿನಲ್ಲಿಯೂ ಉಹಿಸಿರಲಿಲ್ಲ . ಮರೆಯಬೇಡವೆಂದು ಹೇಳುತ್ತಲೆ ನೀನೇ ಮರೆತುಹೋದೆ.
ಅಮರ ಪ್ರೇಮಿಯಾಗುವ ಆಸೆ ನನಗಿರಲಿಲ್ಲ. ಅವರ ನೆರಳಲ್ಲಿ ಆದರೂ ಬದುಕಬೇಕೆಂದಿದ್ದೆ. ಆದರೆ ಏನೊಂದೂ ಆಗಲಿಲ್ಲ. ಈಗ ಬರೀ ನಿನ್ನ ನೆನಪುಗಳನ್ನೇ ಮೆಲುಕು ಹಾಕುತ್ತಾ ಕಾಲ ಕಳೆಯುವಂತಾಗಿದೆ.
ಪಕ್ಕಕ್ಕಿದ್ದವಳನ್ನು ನೋಡುತ್ತಾ , ಸೇರುವ ಗುರಿಯನ್ನೇ ಮರೆತೆ, ಈಗ ನೀನು ಪಕ್ಕಕ್ಕಿಲ್ಲ , ಗುರಿ ಸೇರಬೇಕೆಂದರೆ ಆ ಶಕ್ತಿ ಉಳಿದಿಲ್ಲ.
ಹಲವಾರು ದಿನಗಳ ಪ್ರೇಮ ಕಥನದ ನೂರಾರು ಸಂತೋಷದ ಅಧ್ಯಾಯಗಳನ್ನು ಅಗಲಿಕೆಯ ಕೊನೆಯ ಅಧ್ಯಾಯ ನಾಶಮಾಡಿಬಿಟ್ಟಿತು. ನಮ್ಮಿಬ್ಬರ ಪ್ರೀತಿ, ಮಾತು _ ಮೌನಗಳು ಬೆಸುಗೆಯಾಗಿತ್ತು. ಅದರಲ್ಲಿ ಭಾವ ತರಂಗಗಳ ಮಾಧುರ್ಯವಿತ್ತು. ಒಲವಿನ ಅಲೆಗಳ ಸ್ಪರ್ಶವಿತ್ತು . ಆದರಿಂದು ಎಲ್ಲವೂ ಕಳಚಿಬಿತ್ತು . ನೀನು ಹೇಗೆ ಪ್ರೀತಿಸಬೇಕೆಂದು ಹೇಳಿ ಕೊಟ್ಟಳೇ ವಿನಹ , ಹೇಗೆ ಮರೆಯಬೇಕೆಂದು ಹೇಳಿ ಕೊಡಲೇಯಿಲ್ಲ .
ಈಗ ನಿನ್ನ ಬದಲಾಗಿ ನಿನ್ನ ನೆನಪುಗಳನ್ನೇ ಪ್ರೀತಿಸುತ್ತಿದ್ದೇನೆ. ಈಗ ಪ್ರತಿದಿನವು ತುಟಿಯ ಮೇಲೆ ತುಟಿ. ಮುತ್ತಿಗಲ್ಲ..; ಮೌನಕ್ಕೆ. ಕಣ್ಣಿಂದ ನೀರು, ನೋವಿನಿಂದ ಅಲ್ಲ; ನನ್ನವಳ ನೆನಪಿನಿಂದ. ನಿದ್ರೆ ಆವರಿಸಿದರೂ ಕಣ್ಮುಚ್ಚಲಾರೆ , ಬೇಜಾರದಿಂದಲ್ಲ; ಕನಸುಗಳ ಆಲಿಂಗನಕ್ಕೆ. ಕನಸುಗಳಿಗೂ ಒಳ್ಳೆಯ ಮನಸ್ಸಿದೆ , ಪ್ರತಿದಿನವೂ ನನ್ನವಳನ್ನು ತೋರಿಸುತ್ತವೆ. ಇವತ್ತಿಗೂ ನೆನಪುಗಳ ತೂಗುಯ್ಯಾಲೆಯಲ್ಲಿ ತೇಲಾಡುವ ಏಕಾಂಗಿ ನಾನು.
ಇಂತಿ ನಿನ್ನ ಪ್ರೀತಿಯ
ಅರವಿಂದ ಕನಮಡಿ