ದ್ರಾಕ್ಷಿ ನಾಡಿನಲ್ಲೊಂದು ಮಹಾ ವಂಚನೆ ಪ್ರಕರಣ, ಕೋಟ್ಯಂತರ ರೂ.ಪಂಗನಾಮ, ಗುಜರಾತ್‌ನಿಂದ ಆರೋಪಿಯನ್ನು ಹೆಡೆಮುರಿ ಕಟ್ಟಿ ತಂದ ಖಾಕಿ ಪಡೆ
ಸರಕಾರ್ ನ್ಯೂಸ್ ವಿಜಯಪುರ
ಕೋಟ್ಯಂತರ ರೂ.ಮೌಲ್ಯದ ಒಣದ್ರಾಕ್ಷಿ ಖರೀದಿಸಿ ಗುಜರಾತ್‌ಗೆ ಪರಾರಿಯಾಗಿರುವ ಖದೀಮರನ್ನು ಬೆನ್ನಟ್ಟಿದ ಸಿಪಿಐ ರಮೇಶ ಅವಜಿ ನೇತೃತ್ವದ ಖಾಕಿ ಪಡೆ ಆರೋಪಿಯನ್ನು ಬಂಧಿಸಿದೆ.
ಕಳೆದೊಂದು ವಾರದಿಂದ ಸಂಚಲನ ಮೂಡಿಸಿದ್ದ ಒಣದ್ರಾಕ್ಷಿ ವಂಚನೆ ಪ್ರಕರಣಕ್ಕೆ ಕೊನೆಗೂ ಖಾಕಿ ಪಡೆ ಇತಿಶ್ರೀ ಹಾಡಿದ್ದು, ಆರೋಪಿ ಕೃನಾಲಕುಮಾರ ಅಲಿಯಾಸ್ ಸಚೀನ್ ಮಹೇಂದ್ರಕರ ಪಟೇಲನನ್ನು ಬಂಧಿಸಿದ ಆತನಿಂದ ಸುಮಾರು 117 ಟನ್ ಒಣದ್ರಾಕ್ಷಿಯನ್ನು ಹಿಡಿದು ತಂದಿದ್ದಾರೆ. ಲಾರಿ ಸಹಿತ ಒಟ್ಟು 2.2 ಕೋಟಿ ರೂ.ಮೌಲ್ಯದ ದಾಸ್ತಾನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ವಿವರ:
ಸ್ಥಳೀಯ ಇಂಡಿ ರಸ್ತೆಯಲ್ಲಿರುವ ಕೈಗಾರಿಕೆ ಪ್ರದೇಶದಲ್ಲಿರುವ ನಾಲ್ಕು ಕೋಲ್ಡ್ ಸ್ಟೋರೇಜ್‌ನಿಂದ ಒಣದ್ರಾಕ್ಷಿ ಖರೀದಿಸಿದ ಗುಜರಾತ್ ಮತ್ತು ರಾಜಸ್ಥಾನ ಮೂಲದ ಕಮಲಕುಮಾರ, ಕೃನಾಲಕುಮಾರನಫ್ ಸಚೀನ್ ಮಹೇಂದ್ರಕುಮಾರ ಪಟೇಲ, ಸುನೀಲ್, ಜಯೇಶ್ ಬ್ಯಾಂಕ್ ಖಾತೆಗೆ ಹಣ ನೀಡುವುದಾಗಿ ನಂಬಿಸಿ ಪರಾರಿಯಾಗಿದ್ದರು.
ಈ ಹಿಂದೆ ಇದೇ ರೀತಿ ಖರೀದಿಸಿ ಸಕಾಲಕ್ಕೆ ಹಣ ಸಂದಾಯ ಮಾಡಿದ್ದನ್ನು ನಂಬಿ ಒಣದ್ರಾಕ್ಷಿ ನೀಡಿದ್ದ ಸಿದ್ಧಶ್ರೀ ಸಂಸ್ಥೆಯ ಕೋಲ್ಡ್ ಸ್ಟೋರೇಜ್‌ನ ಸಂತೋಷಕುಮಾರ ಸಿದ್ರಾಮ ಗುಂಜಟಗಿ, ತೌಫೀಕ್ ಸಲೀಮ್ ಅಂಗಡಿ, ಜಾಕೀರ್ ಹಾಜಿಲಾ ಬಾಗವಾನ ಹಾಗೂ ಅಬ್ದುಲ್‌ಖಾದರ ಮೊಹಮ್ಮದ್ಖಾಸೀಮ್ ತಹಸೀಲ್ದಾರ್ ಅವರು ವಂಚನೆಗೊಳಗಾದ ಪೊಲೀಸರ ಮೊರೆ ಹೋಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಗೋಳಗುಮ್ಮಟ ಠಾಣೆ ಪೊಲೀಸರು ಎಸ್‌ಪಿ ಹೆಚ್.ಡಿ. ಆನಂದಕುಮಾರ ಹಾಗೂ ಎಸ್‌ಪಿ ರಾಮ ಅರಸಿದ್ದಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಲಕ್ಷ್ಮಿ ನಾರಾಯಣ ಹಾಗೂ ಸಿಪಿಐ ರಮೇಶ ಅವಾಜಿ ನೇತೃತ್ವದಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹಿಡಿದು ತಂದಿದ್ದಾರೆ. ತಂಡದಲ್ಲಿ ಪಿಎಸ್‌ಐ ಉಮೇಶ ಗೆಜ್ಜಿ ಹಾಗೂ ಸಿಬ್ಬಂದಿ ಇದ್ದರು.