ಕಂದಾಯ ದಿನಾಚರಣೆ ಪ್ರಯುಕ್ತ ಶ್ರಮದಾನ ಕಾರ್ಯಕ್ರಮ
ವಿಜಯಪುರ: ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖಾ ನೌಕರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಕಂದಾಯ ದಿನ ಆಚರಣೆಯ ಅಂಗವಾಗಿ ಶ್ರಮದಾನ ಸ್ವಚ್ಚತಾ ಹಾಗೂ ಸಸಿ ನೆಡುವ ಕಾರ್ಯಕ್ರಮ ಸೋಮವಾರ ನಡೆಯಿತು.
ಕಂದಾಯ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಅಧಿಕಾರಿ,ಸಿಬ್ಬಂದಿ ಜೊತೆಗೂಡಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸ್ವಚ್ಚತಾ ಶ್ರಮದಾನ ಕೈಗೊಂಡು, ನಂತರ ಜಿಲ್ಲಾ ಪಂಚಾಯತಿಯ ರಸ್ತೆಯಲ್ಲಿರುವ ಚುನಾವಣಾ ವ್ಹೇರ್ ಹೌಸ್ ಆವರಣದಲ್ಲಿ ಗಿಡ ನೆಟ್ಟು ಸಸಿಗೆ ನೀರೆರೆದು ಮಾತನಾಡಿದ ಅವರು, ಸ್ವಚ್ಚತಾ ಕಾರ್ಯಕ್ರಮವು ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನವು ಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ಕಚೇರಿಯ ಆವರಣವೂ ಸೇರಿದಂತೆ ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಿಳಿಸಿದರು. ವಿವಿಧ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಮನ್ವಯ ಸಾಧಿಸಿ ಚುನಾವಣಾ ವ್ಹೇರ್ ಹೌಸ್‌ನ ಖಾಲಿ ಇರುವ ಆವರಣದಲ್ಲಿ ಐದು ನೂರು ಸಸಿಗಳನ್ನು ನೆಡುವುದರ ಮೂಲಕ ಅರಣ್ಯೀಕರಣಗೊಳಿಸಿ ಪರಿಸರ ಪ್ರೀತಿ ಮೆರೆದು, ಈ ಸ್ಥಳವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೇಳಿದರು. ಈ ಸಂದರ್ಭ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ಉಪವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ, ಆಹಾರ ಇಲಾಖೆಯೆ ಉಪನಿರ್ದೇಶಕ ವಿನಯಕುಮಾರ ಪಾಟೀಲ, ವಿಜಯಪುರ ತಹಶೀಲ್ದಾರ ಶ್ರೀಮತಿ ಕವಿತಾ, ಕಂದಾಯ ಇಲಾಖೆಯ ನೌಕರ ಸಂಘದ ಅಧ್ಯಕ್ಷರಾದ ಜಿ.ಎಸ್ ರಾಜಾಪೂರ, ಪ್ರಧಾನ ಕಾರ್ಯದರ್ಶಿ ಗಣೇಶ ಡೋಬಳೆ, ಸದಸ್ಯರಾದ ಎಸ್.ಎಸ್. ತೇರದಾಳ, ಮಹಿಪತಿ ದೇಸಾಯಿ, ಪವನ ಕುಮಾರ ನಿಂಬಾಳ್ಕರ್, ರಮೇಶ್ ಚವ್ಹಾಣ, ಮಹೇಶ ಬಳಗಾನೂರ ಉಪಸ್ಥಿತರಿದ್ದರು.