ಅಕ್ರಮ-ಸಕ್ರಮ ಯೋಜನೆಯಡಿ ಟಿಸಿ ಕೊಡಲು ಲಂಚ, ಹೆಸ್ಕಾಂ ಲೈನ್ ಮನ್ ಎಸಿಬಿ ಬಲೆಗೆ
ಸರಕಾರ್ ನ್ಯೂಸ್ ವಿಜಯಪುರ
ಸರ್ಕಾರ ರೈತರಿಗೆ ಅನುಕೂಲವಾಗಲೆಂದು ಅಕ್ರಮ ಸಕ್ರಮ ಯೋಜನೆಯಡಿ ವಿದ್ಯುತ್ ಪರಿವರ್ತಕ ಕೊಡಲು ಅವಕಾಶವೇನೋ ಕಲ್ಪಿಸಿದೆ. ಅದನ್ನೇ ಬಂಡವಾಳ ಮಾಡಿಕೊಂಡ ಹೆಸ್ಕಾಂ ಸಿಬ್ಬಂದಿ ರೈತರ ಸುಲಿಗೆಗೆ ಇಳಿದುಬಿಟ್ಟಿದ್ದಾರೆ.
ಹೌದು, ಅಕ್ರಮ ಸಕ್ರಮ ಯೋಜನೆಯಡಿ ಟಿಸಿ ಕೊಡಲು ರೈತನಿಂದ ಲಂಚ ಪಡೆಯುತ್ತಿದ್ದ ಲೈನ್ ಮನ್ ಮಂಗಳವಾರ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಚಡಚಣ ಹೆಸ್ಕಾಂ ಲೈನ್ ಮನ್ ಸಂಜೀವ ಶಿವಲಿಂಗಪ್ಪ ಅಂಬಿ ಬಂಧಿತ ಆರೋಪಿ. ರೈತನಿಗೆ ಟಿಸಿ ಕೊಡಲು ಬರೋಬ್ಬರಿ 25 ಸಾವಿರ ರೂ.ಗಳಿಗೆ ಈತ ಲಂಚಕ್ಕೆ ಬೇಡಿಕೆ ಇರಿಸಿದ್ದ. ಮರಗೂರ ಕ್ರಾಸ್ ಬಳಿಯ ಬಸ್ ನಿಲ್ದಾಣದಲ್ಲಿ ರೈತನಿಂದ ಹಣ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಎಸಿಬಿ ಎಸ್ ಪಿ ನೇಮಗೌಡ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಮಂಜುನಾಥ ಗಂಗಲ್ಲ ನೇತೃತ್ವದ ಇನ್ ಸ್ಪೆಕ್ಟರ್ ಪರಮೇಶ್ವರ ಜಿ.ಕವಟಗಿ ಮತ್ತಿತರರನ್ನು ಒಳಗೊಂಡ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ.