ಬಿಸಿಲೂರಿನಲ್ಲಿ ವರುಣಾಘಾತ, ಸಿಡಿಲಿಗೆ ಇಬ್ಬರು ಬಲಿ ! ಅಯ್ಯೋ ದುರ್ವಿಧಿಯೇ…!!!
ಸರಕಾರ ನ್ಯೂಸ್ ಇಂಡಿ
ಭೀಕರ ಬರ ಹಾಗೂ ರಣಭೀಕರ ಬಿಸಿಲಿಗೆ ಬಸವಳಿದಿದ್ದ ವಿಜಯಪುರ ಜಿಲ್ಲೆಯ ಜನತೆಗೆ ಗುರುವಾರ ಸುರಿದ ಮಳೆ ಒಂದೆಡೆ ಸಮಾಧಾನ ತಂದಿದ್ದರೆ ಸಿಡಿಲಿಗೆ ಇಬ್ಬರು ಬಲಿಯಾಗುವ ಮೂಲಕ ಆಘಾತ ನೀಡಿದೆ !
ಹೌದು, ಇಂಡಿ ಪಟ್ಟಣದ ಹೊರವಲಯ ಹಾಗೂ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಕೃಷಿ ಕಾರ್ಯದಲ್ಲಿ ತಲ್ಲೀನವಾಗಿದ್ದ ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ.
ಪಟ್ಟಣದ ಹೊರವಲಯದಲ್ಲಿ ಕುರಿ ಮೇಯಿಸುತ್ತಿದ್ದ 15 ವರ್ಷದ ಬಾಲಕ ಬೀರಪ್ಪ ನಿಂಗಪ್ಪ ಅವರಾದಿ ಹಾಗೂ ಹಿರೇಮಸಳಿಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಸೋಮಶೇಖರ ಕಾಶಿನಾಥ ಪಟ್ಟಣಶೆಟ್ಟಿ (43) ಸಿಡಿಲಿಗೆ ಜೀವ ತೆತ್ತಿದ್ದಾರೆ.
ಸೋಮಶೇಖರ ಕುಟುಂಬಸ್ಥರೊಂದಿಗೆ ಜಮೀನಿನಲ್ಲಿ ಕೆಲಸ ಮಾಡುವಾಗ ಏಕಾಏಕಿ ಸಿಡಿಲು ಬಡೆದಿದೆ. ಕೂಡಲೇ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿಯೇ ಸೋಮಶೇಖರ ಅಸುನೀಗಿದ್ದಾರೆ. ಇವರೊಂದಿಗಿದ್ದ ಇಬ್ಬರು ಹೆಣ್ಣು ಮಕ್ಕಳಿಗೆ ಸಿಡಿಲಿನ ಶಾಖ ತಟ್ಟಿದೆ. ಇನ್ನು ಬಾಲಕ ಬೀರಪ್ಪ ಮಳೆ ಬರುತ್ತಿದೆ ಎಂದು ಮರದ ಬುಡಕ್ಕೆ ನಿಂತಿದ್ದೇ ತಪ್ಪಾಗಿದ್ದು, ಏಕಾಏಕಿ ಬಡಿದ ಸಿಡಿಲಿಗೆ ಸ್ಥಳದಲ್ಲಿಯೇ ಅಸುನೀಗಿದ್ದಾನೆ.
(ಕ್ಷಣಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಮಾಡಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)