ಹಿಂದುಳಿದ ವರ್ಗದ ಬಗ್ಗೆ ಕಳಕಳಿ, ಸದನದಲ್ಲಿ ಶಾಸಕ ಯಶವಂತರಾಯಗೌಡ ಪ್ರಶ್ನೆ, ಸಮುದಾಯ ಭವನಗಳಿಗೆ ಅನುದಾನ ಏಕಿಲ್ಲ…?
ಬೆಂಗಳೂರ: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಮುದಾಯ ಭವನಗಳ ಸ್ಥಿತಿ ಶೋಚನೀಯವಾಗಿದೆ. ಸರ್ಕಾರದ ಅನುದಾನದ ಕೊರತೆ ಹಾಗೂ ಇಚ್ಛಾಶಕ್ತಿಯ ಅಭಾವದಿಂದಾಗಿ ಅನೇಕ ಸಮುದಾಯ ಭವನಗಳು ಅಪೂರ್ಣಗೊಂಡಿವೆ. ಇದಕ್ಕೆ ಇಂಡಿ ವಿಧಾನ ಸಭೆ ಕ್ಷೇತ್ರವೇ ಸಾಕ್ಷಿ!
ಇಂಡಿ ವಿಧಾನ ಸಭೆ ಕ್ಷೇತ್ರದಲ್ಲಿ 2018-19ನೇ ಸಾಲಿನಲ್ಲಿ 39 ಕನಕ ಭವನ ಹಾಗೂ ಅಂಬಿಗರ ಚೌಡಯ್ಯ ಭವನಗಳು ಮಂಜೂರಾಗಿದ್ದು, ಸದರಿ ಭವನಗಳ ಕಾಮಗಾರಿ ಈವರೆಗೂ ಪ್ರಾರಂಭವಾಗದೇ ಇರುವ ಬಗ್ಗೆ ಶಾಸಕ ಯಶವಂತರಾಯಗೌಡ ಪಾಟೀಲ ಸದನದಲ್ಲಿ ಪ್ರಶ್ನಿಸಿದ್ದಾರೆ.
ಪ್ರತಿಕ್ರಿಯೆ ನೀಡಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, 2017-18ನೇ ಸಾಲಿನಲ್ಲಿ ಇಂಡಿ ತಾಲೂಕಿನ ವಿವಿಧ ಸ್ಥಳಗಳಲ್ಲಿ 39 ಕನಕ ಭವನ ಹಾಗೂ ಅಂಬಿಗರ ಚೌಡಯ್ಯ ಭವನಗಳಿಗೆ ತಲಾ 5 ಲಕ್ಷ ರೂ.ಗಳಂತೆ ಒಟ್ಟು 195 ಲಕ್ಷ ರೂ.ಅನುದಾನ ಮಂಜೂರಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ 2021 ಫೆ. 11 ರಂದು ವಿಜಯಪುರ ಜಿಲ್ಲೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ 39 ಸಮುದಾಯ ಭವನ ಕಾಮಗಾರಿಗಳ ಪೈಕಿ 29 ಸಮದಾಯ ಭವನಗಳ ಕಾಮಗಾರಿ ರದ್ದು ಪಡಿಸಿ 10 ಭವನಗಳಿಗೆ ಈ ಅನುದಾನ ಬಳಕೆ ಮಾಡುವಂತೆ ತೀರ್ಮಾನವಾಗಿದ್ದು, ಅದರಂತೆ 10 ಭವನಗಳ ನಿರ್ಮಾಣಕ್ಕೆ ಕೆಆರ್ ಐಡಿಎಲ್ ಸಲ್ಲಿಸಿದ ಅಂದಾಜು ಪಟ್ಟಿ ಹಾಗೂ ನೀಲಿ ನಕ್ಷೆಗಳೊಂದಿಗೆ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆ ಪರೀಶೀಲನೆ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ಮುಂದುವರಿದು ಸದರಿ ಕಾಮಗಾರಿಗಳಿಗೆ ಒಟ್ಟು 195 ಲಕ್ಷ ರೂ.ಅನುದಾನ ಮಂಜೂರಾಇದ್ದು ಈ ಪೈಕಿ 48.75 ಲಕ್ಷ ರೂ.ಬಿಡುಗಡೆಯಾಗಿದೆ. 39 ಸಮುದಾಯ ಭವನಗಳ ಕಾಮಗಾರಿ ಪೂಕಿ 29 ಕಾಮಗಾರಿಗಳನ್ನು ರದ್ದುಪಡಿಸಿ ಪ್ರಗತಿಯಲ್ಲಿರುವ 10 ಸಮುದಾಯ ಭವನಗಳಿಗೆ ತಿದ್ದುಪಡಿಯಾದ ನಂತರ ಕಟ್ಟಡ ಕಾಮಗಾರಿಗಳ ಪ್ರಗತಿಯನ್ನಾಧರಿಸಿ ಸದರಿ ಯೋಜನೆಯಡಿ ಒದಗಿಸುವ ಅನುದಾನ ಹಾಗೂ ರಾಜ್ಯದ ಒಟ್ಟಾರೆ ಬೇಡಿಕೆಯನ್ನಾಧರಿಸಿ ಬಾಕಿ ಅನುದಾನನ ಬಿಡುಗಡೆಗೊಳಿಸಲು ಕ್ರಮ ವಹಿಹುಸುವಾಗಿ ತಿಳಿಸಿದ್ದಾರೆ.