ವಿಜಯಪುರದ ಇಂಜಿನಿಯರ್‌ಗೆ ಒಂದೂವರೆ ಕೋಟಿ ಮೋಸ..
ಆನ್ ಲೈನ್ ದೋಖಾ- ಒಂದೂವರೆ ಕೋಟಿ ರೂಪಾಯಿ ಕಳೆದುಕೊಂಡ ಇಂಜಿನಿಯರ್ !
ವಿಜಯಪುರ: ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಇಲ್ಲೋರ್ವ ಇಂಜಿನಿಯರ್ ಆನ್ ಲೈನ್ ಷೇರ್ ಟ್ರೆಡಿಂಗ್ ನಲ್ಲಿ ಹಣ ಹಾಕಿ ಒಂದೂವರೆ ಕೋಟಿ ರೂಪಾಯಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಸಿಂದಗಿಯ ಇಂಜಿನಿಯರ್ ಬಾಪುಗೌಡ ಬಸನಗೌಡ ಪಾಟೀಲ ಆನ್‌ಲೈನ್ ಟ್ರೇಡಿಂಗ್ ನಂಬಿ ಬರೋಬ್ಬರಿ 1.61 ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ. ‘ಟ್ರೇಡ್ ಬುಲ್ಸ್’ ಎಂಬ ನಕಲಿ ಷೇರ್ ಟ್ರೇಡಿಂಗ್ ಆ್ಯಪ್ ತಯಾರಿಸಿ ರಿಯಾಯಿತಿ ದರದಲ್ಲಿ ಖರೀದಿಸಿದ ಷೇರ್ ಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಹಂಚಿಕೆ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನು ನಂಬಿ ಬಾಪುಗೌಡರು ಹಣ ಹಾಕಿದ್ದಾರೆ. ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಿಂದ 1,32,10,000 ರೂ. ಮತ್ತು ಐಸಿಐಸಿಐ ಬ್ಯಾಂಕ್‌ನಿಂದ 29,62,500 ರೂ. ಹಾಗೂ ಮತ್ತಿತರ 14 ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮೂಲಕ ಹಣ ಹಾಕಿಸಿಕೊಂಡ ಕಿರಾತಕರು ಮರಳಿ ನೀಡದೇ ವಂಚಿಸಿದ್ದಾರೆ. ಇದೀಗ ಬಾಪುಗೌಡರು ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.