ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಸಾವು, ಜೂಜಾಟ ನಿರತ ಆರು ಜನ ಕೃಷ್ಣೆ ಪಾಲು, ಅಯ್ಯಯ್ಯೋ…..ತೆಪ್ಪ ಮಗುಚಿ ಸತ್ತಿದ್ದು ಹೇಗೆ?
ಸರಕಾರ ನ್ಯೂಸ್ ವಿಜಯಪುರ
ಪೊಲೀಸರಿಂದ ತಪ್ಪಿಸಿಕೊಳ್ಳಲು ತೆಪ್ಪ ಏರಿ ನದಿ ದಾಟುತ್ತಿದ್ದ ಆರು ಜನ ಮೃತಪಟ್ಟ ಘಟನೆ ಕೊಲ್ಹಾರ ತಾಲೂಕಿನ ಹಳೇ ಬಳೂತಿ ಬಳಿಯ ಕೃಷ್ಣಾ ತೀರದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಗ್ರಾಮದ ಹೊರವಲಯದಲ್ಲಿರುವ ನದಿ ಪಾತ್ರದಲ್ಲಿ ಜೂಜಾಡುತ್ತಿದ್ದ ವೇಳೆ ಕೊಲ್ಹಾರ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆ. ಒಟ್ಟು ಎಂಟು ಜನರ ಪೈಕಿ ಇಬ್ಬರು ಪರಾರಿಯಾಗಿದ್ದಾರೆ. ಇನ್ನುಳಿದ ಆರು ಜನ ತೆಪ್ಪ ಹತ್ತಿ ನದಿ ದಾಟುತ್ತಿದ್ದ ಸಂದರ್ಭ ಭಾರ ತಾಳದೇ ತೆಪ್ಪ ಮಗುಚಿದೆ. ಸುಳಿಯಿಂದ ಪಾರಗಲಾಗದೆ ಆರು ಜನ ನೀರು ಪಾಲಾಗಿದ್ದಾರೆ. ಆ ಪೈಕಿ ಓರ್ವನ ಶವ ಪತ್ತೆಯಾಗಿದ್ದು, ಇನ್ನುಳಿದ ಐವರಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.
ಘಟನೆ ವಿವರ:
ತಿಕೋಟಾ ಯೋಧ ನಿಧನ, ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ಸೈನಿಕ, ಅಯ್ಯೋ ಏನಾಯಿತು? ಹೇಗಾಯಿತು?
ಬಳೂತಿ ಬಳಿಯ ಕೃಷ್ಣಾ ನದಿ ಪಾತ್ರದಲ್ಲಿ ಜೂಜಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಕೊಲ್ಹಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಹೊಂಚು ಹಾಕಿ ಬಂಧಿಸಲು ಮುಂದಾದಾಗ ಪೊಲೀಸರನ್ನು ಕಂಡ ಜೂಜುಕೋರರು ದಿಕ್ಕಾ ಪಾಲಾಗಿದ್ದಾರೆ. ಈ ವೇಳೆ ನದಿಪಾತ್ರದಲ್ಲಿದ್ದ ತೆಪ್ಪ ಏರಿದ ಆರು ಜನ ಅದನ್ನು ಮುನ್ನಡೆಸಿಕೊಂಡು ನದಿ ಮಧ್ಯಕ್ಕೆ ಬಂದಿದ್ದಾರೆ. ಆದರೆ, ತೆಪ್ಪ ಭಾರ ತಾಳದೆ ಓಲಾಡಿದೆ. ಸುಳಿಗೆ ಸಿಲುಕಿದೆ. ಮಗುಚಿ ಬಿದ್ದಿದ್ದು, ಎಲ್ಲರೂ ನೀರು ಪಾಲಾಗಿದ್ದಾರೆ.
ಕೂಡಲೇ ಪೊಲೀಸರು ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ದೀರ್ಘ ಕಾರ್ಯಾಚಾರಣೆ ನಡೆಸಿದರೂ ಒಬ್ಬನ ಶವ ಮಾತ್ರ ದೊರೆತಿದೆ. ಮೃತ ವ್ಯಕ್ತಿಯನ್ನು ಕೊಲ್ಹಾರ ಪಟ್ಟಣದ ಪುಂಡಲೀಕ ಮಲ್ಲಪ್ಪ ಯಂಕಂಚಿ (36) ಎಂದು ಗುರುತಿಸಲಾಗಿದೆ. ಇನ್ನುಳಿದ ಐವರ ಮಾಹಿತಿ ಲಭ್ಯವಾಗಿಲ್ಲ.
ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಎಎಸ್‌ಪಿ ಶಂಕರ ಮಾರಿಹಾಳ ದೌಢಾಯಿಸಿದ್ದು, ಕಾರ್ಯಾಚರಣೆಗೆ ವೇಗ ನೀಡಿದರು. ರಾತ್ರಿಯಾದಂತೆಲ್ಲ ಕಾರ್ಯಾಚರಣೆಗೆ ತೊಡಕು ಉಂಟಾಯಿತು. ಹೀಗಾಗಿ ಮೃತರ ಹೆಸರು ಮತ್ತು ವಿವರದ ಸ್ಪಷ್ಟತೆ ಸಿಕ್ಕಿಲ್ಲವೆಂದು ಸ್ಥಳೀಯರು ತಿಳಿಸಿದರು.
ಈ ಬಗ್ಗೆ ಎಸ್‌ಪಿ ಋಷಿಕೇಶ ಸೋನಾವಣೆ ಅವರನ್ನು ಸಂಪರ್ಕಿಸಲಾಗಿ, ಆರು ಜನ ಸಾವಿಗೀಡಾಗಿದ್ದು, ಓರ್ವನ ಶವ ಪತ್ತೆಯಾಗಿದೆ. ಕಾರ್ಯಾಚರಣೆ ಮುಂದುವರಿದಿದೆ ಎಂದರು.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)