ಗಣಪತಿ ಮೂರ್ತಿಗೆ ಕಲ್ಲೆಸೆದ ಕಿಡಿಗೇಡಿ ಬಂಧನ, ಯಾರು? ಹೀಗೇಕೆ ಮಾಡಿದ?
ವಿಜಯಪುರ: ಐತಿಹಾಸಿಕ ವಿಜಯಪುರ ನಗರದ ಗಣೇಶ ವೃತ್ತದಲ್ಲಿನ ಮೂರ್ತಿಗೆ ಕಲ್ಲೆಸೆದ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಗಣಪತಿ ಚೌಕ್ ನಲ್ಲಿ ಬುಧವಾರ ರಾತ್ರಿ ಕಿಡಿಗೇಡಿಗಳು ಕಲ್ಲು ಎಸೆದಿದ್ದು, ವೃತ್ತದ ಗಾಜು ಪುಡಿ ಪುಡಿ ಯಾಗಿತ್ತು. ಬೆಳಗ್ಗೆ ಸುದ್ದಿ ತಿಳಿದು ಸ್ಥಳೀಯರು, ಹಿಂದುಪರ ಸಂಘಟನೆಗಳ ಪದಾಧಿಕಾರಿಗಳು ಸ್ಥಳಕ್ಕೆ ದೌಢಾಯಿಸಿದ್ದರು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತಾದರೂ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದರು.
ಸಿಸಿ ಟಿವಿ ದೃಶ್ಯದಲ್ಲಿ ಸೆರೆ: ಕಿಡಿಗೇಡಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಟೋದಲ್ಲಿ ಬಂದ ಇಬ್ಬರು ಪೊಲೀಸ್‌ನ ಸಮ್ಮುಖದಲ್ಲಿಯೇ ಮೂರ್ತಿಯತ್ತ ಕಲ್ಲು ತೂರಿರುವುದು ಕಂಡು ಬಂದಿದೆ. ದೃಶ್ಯದಲ್ಲಿ ಓರ್ವ ವ್ಯಕ್ತಿ ಕಿಡಿಗೇಡಿಗಳನ್ನು ತಡೆಯಲೆತ್ನಿಸಿದ್ದಾನಾದರೂ ಕಲ್ಲು ತೂರಿದ ಬಳಿಕ ಆತನೂ ಸುಮ್ಮನಾಗಿದ್ದಾನೆ. ಮೊದಲು ಓರ್ವ ಕಲ್ಲು ಎಸೆದು ಗ್ಲಾಸ್ ಒಡೆದ ಬಳಿಕ ಮತ್ತೊಬ್ಬ ಕೂಡಾ ಕಲ್ಲು ಎಸೆದಿದ್ದಾನೆ. ಇದೊಂದು ಉದ್ದೇಶ ಪೂರ್ವಕ ಕೃತ್ಯ ಎಂಬುದು ಸಿಸಿಟಿವಿ ದೃಶ್ಯಾವಳಿಯಿಂದ ತಿಳಿದು ಬಂದಿದೆ.
ಓರ್ವನ ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಓರ್ವನನ್ನು ಬಂಧಿಸಿದ್ದು, ಇನ್ನೋರ್ವನಿಗಾಗಿ ಹುಡುಕಾಟ ನಡೆಸಿದ್ದಾರೆ. ಟಕ್ಕೆಯ ಸೋಹೆಲ್ ಮುನ್ನಾ ಜಮಾದಾರ (21) ಬಂಧಿತ ಆರೋಪಿ. ಗಾಂಧಿ ಚೌಕ್ ಪಿಎಸ್‌ಐ ಪ್ರದೀಪ್ ತಳಕೇರಿ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ. ಚುರುಕಿನ ಕಾರ್ಯಾಚರಣೆ ನಡೆಸಿ ಓರ್ವನನ್ನು ಬಂಧಿಸಿರುವ ಸಿಬ್ಬಂದಿ ಕಾರ್ಯಕ್ಕೆ ಎಸ್‌ಪಿ ಋಷಿಕೇಶ ಸೋನಾವಣೆ ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ. ಇನ್ನೋರ್ವನನ್ನು ಶೀಘ್ರದಲ್ಲಿಯೇ ಬಂಧಿಸಿ ತನಿಖೆ ನಡೆಸುವುದಾಗಿ ಪ್ರತಿಕ್ರಿಯಿಸಿದ್ದಾರೆ.