ವಿಜಯಪುರ

ಜನಕಲಾ ಸಾಂಸ್ಕೃತಿಕ ಮೇಳಕ್ಕೆ ಕ್ಷಣಗಣನೆ, ಹೇಗಿದೆ ಗೊತ್ತಾ ಸಿದ್ಧತೆ?

ಸರಕಾರ ನ್ಯೂಸ್ ವಿಜಯಪುರ

ಮೇ ಸಾಹಿತ್ಯ ಬಳಗ, ಲಡಾಯಿ ಪ್ರಕಾಶನ, ಕವಿ ಪ್ರಕಾಶನ ಮತ್ತು ಚಿತ್ತಾರ ಕಲಾಬಳಗ ಆಶ್ರಯದಲ್ಲಿ ಅಕ್ಟೋಬರ್ 6ರಂದು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿರುವ “ಜನಕಲಾ ಸಾಂಸ್ಜೃತಿಕ ಮೇಳಕ್ಕೆ ಕ್ಷಣಗಣನೆ ಆರಂಭವಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಮೊಟ್ಡಮೊದಲ ಬಾರಿಗೆ ಹೋರಾಟದ ಹಾಡುಗಳ ಮೂಲಕ ಸಮಾಜದಲ್ಲಿ ವೈಚಾರಿಕ ಜಾಗೃತಿ ಮೂಡಿಸುತ್ತಿರುವ ಪ್ರಜಾಗಾಯಕರ ಸಮಾಗಮವಾಗಲಿದೆ.

ಅಕ್ಟೋಬರ್ 6ರಂದು ಮುಂಜಾನೆ 10-30 ಗಂಟೆಗೆ ಮೇ ಕಲಾ ಮಂಡಳಿಯಿಂದ ಹೋರಾಟದ ಹಾಡಿನ ಮೂಲಕ ಪ್ರಾರಂಭಗೊಳ್ಳುವ ಮೇಳವನ್ನು ಮದುವೆ, ಸೋಬಾನೆ, ನಾಮಕರಣ ಮುಂತಾದ ಸಂದರ್ಭಗಳಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಎದೆಯೊಳಗಿಟ್ಟುಕೊಂಡು, ತಾವೇ ಹಾಡು ಕಟ್ಟಿ, ಹಲವು ದಶಕಗಳಿಂದ ಹಾಡುತ್ತ ಬರುತ್ತಿರುವ ಹಿರಿಯ ಜೀವಗಳಾದ ಬಸಮ್ಮ ಪೀರಪ್ಪ ನಡುವಿನಮನಿ, ಆದಮ್ಮ ಚಂದಪ್ಪ ಕದ್ರಿ, ಸಾವಿತ್ರಿಬಾಯಿ ನಿಡೋಣಿ, ರಮಾಬಾಯಿ ಸಂಗಪ್ಪ ಬೆಳ್ಳೆನವರ, ಪದ್ಮಾವತಿ ಸಂಗಪ್ಪ‌ ವಾಘಮೋರೆ ಅವರು ತಮ್ಮ ಹಾಡುಗಳ ಮೂಲಕ ಉದ್ಘಾಟಿಸಲಿದ್ದಾರೆ.

ಖ್ಯಾತ ಜನಪರ ಗಾಯಕರಾದ ಜನಾರ್ಧನ (ಜೆನ್ನಿ) ಮೈಸೂರು, ಲಕ್ಷ್ಮಿಪತಿ ಕೋಲಾರ ದಿಕ್ಸೂಚಿ‌ ಮಾತುಗಳನ್ನಾಡಲಿದ್ದಾರೆ. ಬೇರು-ಬೆವರು ಕಲಾ ಬಳಗ, ಚಿಂತಾಮಣಿ, ದಲಿತ ಕಲಾ ಮಂಡಳಿ ಗದಗ, ಹರ್ಲಾಪುರ ಧಾರವಾಡದ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರದ ಕಲಾತಂಡ, ಕೊಪ್ಪಳದ ಧರಣಿ ಸಾಂಸ್ಕೃತಿಕ ಕಲಾಬಳಗ, ಸಿಂಧನೂರಿನ ಕ್ರಾಂತಿಕಾರಿ ಸಾಂಸ್ಕೃತಿಕ ಸಂಘ, ಕೊತಬಾಳದ ಅರುಣೋದಯ ಕಲಾ ಬಳಗದ ಸದಸ್ಯರು ಇಡೀ ದಿನ ತಮ್ಮ‌ ಕ್ರಾಂತಿಗೀತೆಗಳ ಮೂಲಕ ಹೋರಾಟದ ಕಿಚ್ಚನ್ನು ಹಚ್ಚಲಿದ್ದಾರೆ.

ಜೊತೆಗೆ ಮೈಸೂರು ಮೈಸೂರು ನಿರ್ದಿಗಂತ ಪ್ರಸ್ತುತಿಯ ” ಸಮತೆಯ ಸೊಲ್ಲುಗಳು”, ಹಿರಿಯ ಭಜನಾ ಪದಕಾರರಾದ ಲಕ್ಷ್ಮಣ ಗೊಣಸಗಿ ತಂಡವು ಭಜನಾ ಮತ್ತು ಜಮಖಂಡಿಯ ಸರಸ್ವತಿ ಸಬರದ ಅವರು ವಚನ-ಗಾಯನ ನಡೆಯಲಿದೆ.

ಸಂಜೆ 7 ಗಂಟೆಗೆ ವಿಕ್ರಮ ವಿಸಾಜಿ ರಚಿಸಿದ, ಪ್ರವೀಣರೆಡ್ಡಿ ನಿರ್ದೇಶಿಸಿರುವ, ಕೋಮುವಾದಿ ಹಂತಕರ ಗುಂಡಿಗೆ ಬಲಿಯಾದ ಡಾ. ಎಂ.ಎಂ. ಕಲಬುರ್ಗಿಯವರ ಜೀವನಾಧಾರಿತ ನಾಟಕ “ರಕ್ತವಿಲಾಪ” ಪ್ರದರ್ಶನಗೊಳ್ಳಲಿದೆ.

ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಮೇಳಕ್ಕೆ ಸಹಯೋಗ ನೀಡಿದ್ದು, ಸಮತಾ ಸಮಾಜದ ಕನಸು ಕಾಣುತ್ತಿರುವ ಮನಸುಗಳು ಜೊತೆಗಿವೆ.

error: Content is protected !!