ನರೇಗಾ ಕಾರ್ಮಿಕರಿಗೆ ಸಿಹಿ ಸುದ್ದಿ, ಗ್ರಾಮ ಮಟ್ಟದಲ್ಲಿ ಮಹತ್ವದ ಕಾರ್ಯಕ್ರಮ, ಜಿಪಂ ಸಿಇಒ ರಾಹುಲ್ ಶಿಂಧೆ ನೀಡಿದ ಸಂದೇಶವೇನು ಗೊತ್ತಾ? ಇಲ್ಲಿದೆ ಡಿಟೇಲ್ಸ್
ಸರಕಾರ ನ್ಯೂಸ್ ವಿಜಯಪುರ
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರಿಗಾಗಿ ‘ಗ್ರಾಮ ಆರೋಗ್ಯ ಅಭಿಯಾನ’ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ತಿಳಿಸಿದ್ದಾರೆ.
ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಆದೇಶದ ಮೇರೆಗೆ ಆರೋಗ್ಯ ಸೇವೆ ಒದಗಿಸುವ ಕರ್ನಾಟಕ ಆರೋಗ್ಯ ಸಂವರ್ಧನಾ ಸಂಸ್ಥೆ (ಕರ್ನಾಟಕ ಹೆಲ್ತ್ ಪ್ರಮೋಶನ್ ಟ್ರಸ್ಟ್), ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮೇ 22 ರಿಂದ ಜೂ.22 ರವರೆಗೆ ಒಂದು ತಿಂಗಳವರೆಗೆ ಜಿಲ್ಲೆಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಅಭಿಯಾನ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಅಭಿಯಾನದಡಿ ಮಹಾತ್ಮಗಾಂಧಿ ನರೇಗಾ ಯೋಜನೆಯ ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕೂಲಿ ಕಾರ್ಮಿಕರು ಉಚಿತವಾಗಿ ತಮ್ಮ ಆರೋಗ್ಯ ತಪಾಸಿಸಿಕೊಳ್ಳಬೇಕು. ಈಗಾಗಲೇ ಈ ಅಭಿಯಾನದ ಮೂಲಕ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಾತ್ಮಗಾಂಧಿ ನರೇಗಾ ಕೂಲಿಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ನರೇಗಾದಡಿ ಕೆಲಸ ನಿರ್ವಹಿಸುತ್ತಿರುವ ಇನ್ನೂ ಹಲವು ಕೂಲಿಕಾರ್ಮಿಕರು ಇದರಿಂದ ಹೊರಗುಳಿದಿದ್ದಾರೆ. ಹೆಚ್ಚಿನ ಕೂಲಿಕಾರ್ಮಿಕರಿಗೆ ಅನುಕೂಲ ಒದಗಿಸಿಕೊಡುವ ದೃಷ್ಟಿಯಿಂದ ಆರೋಗ್ಯ ಸೇವೆಯನ್ನು ಒಂದು ತಿಂಗಳ ಕಾಲ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಆರೋಗ್ಯ ಅಭಿಯಾನದಡಿ ಒದಗಿಸಲಾಗುತ್ತಿದೆ ಎಂದು ಶಿಂಧೆ ತಿಳಿಸಿದ್ದಾರೆ.
ಆರೋಗ್ಯ ಕಿಟ್ ವಿತರಣೆ:
ಈಗಾಗಲೇ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಗ್ರಾಮೀಣ ಭಾಗದ ಜನರ ಆರೋಗ್ಯ ಸಮಸ್ಯೆಗಳ ನಿವಾರಣೆಯ ಉದ್ಧೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕೆಎಚ್‌ಪಿಟಿ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಅಮೃತ ಆರೋಗ್ಯ ಅಭಿಯಾನದಡಿ ಹೆಲ್ತ್ ಸ್ಕ್ರೀನ್ ಕಿಟ್ ವಿತರಿಸಲಾಗಿದೆ. ಈ ಕಿಟ್ ಉಪಯೋಗಿಸಿಕೊಂಡು ಸ್ಥಳೀಯ ಆರೋಗ್ಯ ಕೇಂದ್ರದ ಅಧಿಕಾರಿ ಹಾಗೂ ಕೆಎಚ್‌ಪಿಟಿ ಸಿಬ್ಬಂದಿ ಸಹಾಯದಿಂದ ಗ್ರಾಮೀಣರ ಹಾಗೂ ಕೂಲಿಕಾರ್ಮಿಕರ ಆರೋಗ್ಯ ತಪಾಸಣಾ ಕೈಗೊಳ್ಳಲಾಗುವುದು ಎಂದಿದ್ದಾರೆ.
ಸ್ಥಳದಲ್ಲಿಯೇ ಆರೋಗ್ಯ ತಪಾಸಣೆ:
ಗ್ರಾಮ ಪಂಚಾಯಿತಿ ಅಧಿಕಾರಿಗಳು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಚಾಲ್ತಿಯಲ್ಲಿರುವ ಸಮುದಾಯ ಕಾಮಗಾರಿ ಸ್ಥಳದಲ್ಲಿ ಅತೀ ಹೆಚ್ಚು ಜನರು ಕೆಲಸ ನಿರ್ವಹಿಸುತ್ತಿರುವುದರಿಂದ ಸ್ಥಳದಲ್ಲಿಯೇ ಗ್ರಾಮ ಆರೋಗ್ಯ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಈಗಾಗಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ತರಬೇತಿ ಹಮ್ಮಿಕೊಳ್ಳಲಾಗಿದೆ. ಈ ತರಬೇತಿಯಲ್ಲಿ ಜಿಲ್ಲಾ ನೋಡಲ್ ಅಧಿಕಾರಿಗಳಿಗೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸಿಬ್ಬಂದಿಗೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ, ಚುನಾಯಿತ ಸದಸ್ಯರುಗಳಿಗೆ, ಕೆಎಚ್‌ಪಿಟಿಯ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳಿಗೆ, ನರೇಗಾ ಯೋಜನೆಯ ಕಾಯಕ ಬಂಧುಗಳಿಗೆ ಮಾರ್ಗದರ್ಶನದ ಜೊತೆಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದು ಸಿಇಒ ತಿಳಿಸಿದ್ದಾರೆ.
ಗ್ರಾಮ ಮಟ್ಟದಲ್ಲಿ ಜಾಗೃತಿ:
ಗ್ರಾಮ ಆರೋಗ್ಯ ಅಭಿಯಾನವನ್ನು ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಗೊಳಿಸಲು ಈಗಾಗಲೇ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಆರೋಗ್ಯ ಅಭಿಯಾನ ಗ್ರಾಮದಲ್ಲಿ ನಡೆಯುವ ದಿನಾಂಕ, ಸ್ಥಳ, ಸಮಯ ನಿಗದಿಪಡಿಸಿ ಗ್ರಾಮದಲ್ಲಿ ಡಂಗುರ ಸಾರುವುದು, ಕಸ ವಿಲೇವಾರಿ ಘಟಕದಲ್ಲಿ ಜಿಂಗಲ್ಸ್ ಮೂಲಕ, ಮಾಹಿತಿ ವಿವರದ ಕರ ಪತ್ರ ಮುದ್ರಿಸಿ ಹಂಚುವುದೂ ಸೇರಿದಂತೆ ವಿವಿಧ ಪ್ರಚಾರ ಮಾಧ್ಯಮಗಳ ಮೂಲಕ ಬೃಹತ್ ಜಾಗೃತಿ ಮೂಡಿಸಿ ಉದ್ಯೋಗ ಚೀಟಿ ಹೊಂದಿರುವ ಪ್ರತಿಯೊಬ್ಬರು ಆರೋಗ್ಯ ತಪಾಸಣೆಗೊಳಪಡಲು ಜಾಗೃತಿ ಮೂಡಿಸುವತ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.