ಇಂಡಿಯ ರಾಜಕೀಯ ಬರ ನೀಗಿಸಿ, ಯಶವಂತರಾಯಗೌಡರಿಗೆ ಸಚಿವ ಸ್ಥಾನ ಕೊಡಿ, ಯುವ ಮುಖಂಡ ಪುಂಡಲೀಕ ಕಪಾಲಿ ಹೇಳಿದ್ದೇನು ಗೊತ್ತಾ?
ಸರಕಾರ ನ್ಯೂಸ್ ಇಂಡಿ
ನಂಜುಂಡಪ್ಪ ವರದಿ ಪ್ರಕಾರ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆ ಪಟ್ಟಿ ಹೊತ್ತ ಇಂಡಿ ತಾಲೂಕಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ‘ರಾಜಕೀಯ ಬರ’ದ ಹಣೆ ಪಟ್ಟಿ ಅಳಿಸಬೇಕೆಂದು ಕಾಂಗ್ರೆಸ್ ಯುವ ಮುಖಂಡ ಪುಂಡಲೀಕ ಕಪಾಲಿ ಆಗ್ರಹಿಸಿದ್ದಾರೆ.
ಒಂದು ಕಾಲದಲ್ಲಿ ದರೋಡೆ, ಹತ್ಯೆ, ಮರಳು ಮಾಫಿಯಾ, ಅಕ್ರಮ ಶಸ್ತ್ರಾಸ್ತ್ರಗಳಿಗೆ ಹೆಸರಾಗಿದ್ದ ಇಂಡಿ ತಾಲೂಕನ್ನು ಇಂದು ಜಿಲ್ಲಾ ಕೇಂದ್ರವಾಗುವ ಮಟ್ಟಿಗೆ ಅಭಿವೃದ್ಧಿ ಪಡಿಸುವಲ್ಲಿ ವ್ಯಾಪಕ ಶ್ರಮ ವಹಿಸಿದ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಶನಿವಾರ ಸುದ್ದಿಗಾರರಿಗೆ ಅವರು ತಿಳಿಸಿದರು.
ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿ, ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆ, ಬ್ರಿಟಿಷರ ಕಾಲದ ಆಡಳಿತ ಸೌಧದ ಬದಲಿಗೆ ಸ್ಥಾಪನೆಗೊಂಡ ಅತ್ಯಾಕರ್ಷಕ ಮಿನಿ ವಿಧಾನ ಸೌಧ, ತಾಲೂಕು ಕ್ರೀಡಾಂಗಣ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಸಮುದಾಯ ಭವನಗಳ ನಿರ್ಮಾಣ, ನೀರಾವರಿ ಯೋಜನೆಗಳು… ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳ ಮೂಲಕ ತಾಲೂಕಿನ ಘನತೆ ಮತ್ತು ಗೌರವ ಹೆಚ್ಚಿಸಿದವರು ಯಶವಂತರಾಯಗೌಡ ಪಾಟೀಲರು.
ಅಭಿವೃದ್ಧಿ ಕಾರ್ಯಗಳು, ಧಾರ್ಮಿಕ ಮನೋಭಾವ, ಜಾತ್ಯತೀತ ನಿಲುವುಗಳಿಂದಲೇ ಕ್ಷೇತ್ರದ ಜನರ ಮನಗೆದ್ದ ಯಶವಂತರಾಯಗೌಡರನ್ನು ಸತತ ಮೂರು ಬಾರಿ ಜನ ಆಯ್ಕೆ ಮಾಡಿದ್ದಾರೆ. ಭವಿಷ್ಯದಲ್ಲಿ ಇಂಡಿ ಸಮಗ್ರ ಅಭಿವೃದ್ಧಿಯಾಗುವುದರ ಜೊತೆಗೆ ವಿಜಯಪುರ ಜಿಲ್ಲೆಯನ್ನು ಸಮಗ್ರ ನೀರಾವರಿಗೊಳಪಡಿಸುವ ನಿಟ್ಟಿನಲ್ಲಿ ಸಾಕಷ್ಟು ದೂರದೃಷ್ಠಿಕೋನ ಹೊಂದಿರುವ ಯಶವಂತರಾಯಗೌಡರಿಗೆ ಸಚಿವ ಸ್ಥಾನ ನೀಡುವುದರಿಂದ ಪ್ರಾದೇಶಿಕವಾಗಿ, ಸಾಮಾಜಿಕವಾಗಿ ನ್ಯಾಯ ಕಲ್ಪಿಸಿದಂತಾಗಲಿದೆ ಎಂದವರು ತಿಳಿಸಿದ್ದಾರೆ.