ಉಕ್ಕೇನ್ ನಲ್ಲಿ ಸಿಲುಕಿರುವ ವಿಜಯಪುರ ವಿದ್ಯಾರ್ಥಿನಿ, ವಿವಿಧಾ ಮನೆಗೆ ಮುಸ್ಲಿಂರ ಭೇಟಿ, ಸುರಕ್ಷತೆಗಾಗಿ ಅಲ್ಲಾಹುವಿನಲ್ಲಿ ಪ್ರಾರ್ಥನೆ !
ವಿಜಯಪುರ: ಉಕ್ರೇನ್ ನಲ್ಲಿ ಸಿಲುಕಿರುವ ಗುಮ್ಮಟ ನಗರಿಯ ವಿದ್ಯಾರ್ಥಿನಿ ವಿವಿಧಾ ಮನೆಗೆ ಮುಸ್ಲಿಂ ಬಾಂಧವರು ಭೇಟಿ ನೀಡಿ ಸಮಾಧಾನದ ನುಡಿಗಳನ್ನಾಡಿದ್ದಾರೆ. ಮಾತ್ರವಲ್ಲ ವಿವಿಧಾ ಉಕ್ರೇನ್ ನಿಂದ ಸುರಕ್ಷಿತವಾಗಿ ವಾಪಸ್ ಬರಲಿ ಎಂದು ಮನೆಯಂಗಳದಲ್ಲೇ ನಮಾಜ್ ಮಾಡಿ ಅಲ್ಲಾಹುವಿನಲ್ಲಿ ಪ್ರಾರ್ಥಿಸಿದ್ದಾರೆ.
ವಿವಿಧಾ ತಂದೆ ಪ್ರಭು ಮಲ್ಲಿಕಾರ್ಜುನಮಠ ಕಳೆದೊಂದು ವಾರದಿಂದ ತೀವ್ರ ಆತಂಕದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಮುಸ್ಲಿಂ ಬಾಂಧವರ ಭೇಟಿ ನೀಡಿ ಸಾಂತ್ವನ ಹೇಳಿದ್ದು, ಇವರ ಉಪಕಾರ ಎಂದಿಗೂ ಸ್ಮರಿಸಲ್ಲ ಎಂದು ಪ್ರಭು ಮಲ್ಲಿಕಾರ್ಜುನಮಠ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಶೇಷವೆಂದರೆ ಈವರೆಗೂ ಧರ್ಮ, ದೇವರು, ದೇಶಾಭಿಮಾನ ಅಂತೆಲ್ಲ ಭಾಷಣ ಬಿಗಿಯುವ ರಾಜಕಾರಣಿಗಳು ಪ್ರಭು ಅವರ ಮನೆಗೆ ಭೇಟಿ ನೀಡಿ ಸಾಂತ್ವನದ ನುಡಿಗಳನ್ನಾಡಿಲ್ಲ. ಕೇವಲ ಕೆಲವು ಸಣ್ಣ ಪುಟ್ಟ ರಾಜಕಾರಣಿಗಳು, ಸಂಘಟಕರು ಹಾಗೂ ಸುತ್ತಲಿನ ನಿವಾಸಿಗಳು ಮಾತ್ರ ಭೇಟಿ ನೀಡಿ ಸಮಾಧಾನ ಪಡಿಸಿದ್ದಾರೆ. ಪ್ರಭಾವಿ ನಾಯಕರುಗಳಾರೂ ಇತ್ತ ಸುಳಿಯದಿರುವುದು ಖೇದಕರ.
ಮುಸ್ಲಿಂ ಸಮಾಜದವರ ಕಳಕಳಿ ಬಗ್ಗೆ ಪ್ರಭು ಮಲ್ಲಿಕಾರ್ಜುನ ಮಠ ಹಂಚಿಕೊಂಡ ಪೋಸ್ಟ್ ವಿವರ ಹೀಗಿದೆ “ಮುಸ್ಲೀಂಭಾಂಧವರು ನಮ್ಮ ಮನೆಯ ಮುಂದಿನ ಬಯಲು ಜಾಗೆಯಲ್ಲಿ ನನ್ನ ಮಗಳು ಸುರಕ್ಷೀತವಾಗಿ ಬರಲಿ ಎಂದು ಆಲ್ಲಾನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ನೀವೇದನೆ ಮಾಡಿ ಕೊಂಡರು……ಇವರೆಲ್ಲರ ಉಪಕಾರ ಈ ಜನ್ಮದಲ್ಲಿ ತೀರಿಸಲಾರೆ”