ವಿಜಯಪುರ

ತಡವಲಗಾದಲ್ಲಿ 19 ಮಕ್ಕಳು ತೀವ್ರ ಅಸ್ವಸ್ಥ, ವಿಷಾಹಾರ ಸೇವನೆ, ಮಕ್ಕಳ ಸ್ಥಿತಿ ಹೇಗಿದೆ ಗೊತ್ತಾ?

ಸರಕಾರ್ ನ್ಯೂಸ್ ವಿಜಯಪುರ

ವಿಷಾಹಾರ ಸೇವನೆಯಿಂದ ವಸತಿ ಶಾಲೆ ಮಕ್ಕಳು ಅಸ್ವಸ್ಥಗೊಂಡಿದ್ದರಿಂದ ಪಾಲಕರು ಮತ್ತು ವಸತಿ ನಿಲಯದ ಸಿಬ್ಬಂದಿಯಲ್ಲಿ ತೀವ್ರ ಆತಂಕ ಸೃಷ್ಠಿಸಿತು.

ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ಸಂಭವಿಸಿದ್ದು ಅಸ್ವಸ್ಥಗೊಂಡ ಸುಮಾರು 19 ಮಕ್ಕಳನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇಲ್ಲಿನ ಕಸ್ತೂರ ಬಾ ವಸತಿ ಶಾಲೆಯಲ್ಲಿ ಬೆಳಗ್ಗೆ ಉಪಾಹಾರಕ್ಕೆ ಅವಲಕ್ಕಿ ಮತ್ತು ಮೊಸರು ನೀಡಲಾಗಿತ್ತು. ಮಧ್ಯಾಹ್ನ ಚಪಾತಿ, ಅನ್ನ-ಸಾರು, ಬೆಂಡಿ ಪಲ್ಯೆ ಹಾಗೂ ಬೇಳೆ ಸಾರು ನೀಡಲಾಗಿತ್ತು. ಇದಾದ ಬಳಿಕ ಮಕ್ಕಳಲ್ಲಿ ವಾಂತಿ ಭೇದಿ ಆರಂಭವಾಯಿತು.

ಕೂಡಲೇ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಬಿಇಒ ವಸಂತ ರಾಠೋಡ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಾಲೂಕು ಆರೋಗ್ಯಾಧಿಕಾರಿಗಳು ಸಹ ಭೇಟಿ ನೀಡಿದ್ದು ಮಕ್ಕಳ ಆರೋಗ್ಯದಲ್ಲಿ ಯಾವುದೇ ತೊಂದರೆಯಿಲ್ಲ. ಆಸ್ಪತ್ರೆಯಲ್ಲಿಯೇ ಉಳಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

error: Content is protected !!