ಗ್ರಾಮೀಣ ಪ್ರದೇಶದಲ್ಲಿ ಸಿಇಒ ಸಂಚಾರ, ಸ್ಥಳೀಯ ಸಂಸ್ಥೆಗಳಲ್ಲಿ ಸಂಚಲನ, ಆಡಳಿತ ಯಂತ್ರಕ್ಕೆ ಚುರುಕು ನೀಡಿದ ರಾಹುಲ್ ಶಿಂಧೆ
ವಿಜಯಪುರ: ಜಿಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಗೆ ಚುರುಕು ನೀಡುವ ನಿಟ್ಟಿನಲ್ಲಿ ಜಿಪಂ ಸಿಇಒ ರಾಹುಲ್ ಶಿಂಧೆ ದಿಟ್ಟ ಹೆಜ್ಜೆಯನ್ನಿರಿಸಿದ್ದು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಸಂಚಲನ ಮೂಡಿಸುತ್ತಿದ್ದಾರೆ.
ಮೇ 19ರಂದು ಗ್ರಾಮೀಣ ಪ್ರದೇಶದಲ್ಲಿ ಪ್ರವಾಸ ಕೈಗೊಂಡು ಅಂಗನವಾಡಿ, ಶಾಲೆಗಳು ಮತ್ತು ಗ್ರಂಥಾಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಅಲ್ಲಿನ ಸ್ಥಿತಿಗತಿ ಸುಧಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡರು.
ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದ 4ನೇ ವಾರ್ಡ್‌ನಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿದರು. ಪ್ರತಿ ತಿಂಗಳು ಕಡ್ಡಾಯವಾಗಿ ಮಕ್ಕಳು, ಬಾಣಂತಿಯರು ಹಾಗೂ ಗರ್ಭಿಣಿಯರಿಗೆ ಪೂರಕ ಪೌಷ್ಠಿಕ ಆಹಾರವನ್ನು ವಿತರಿಸುತ್ತಿರುವ ಬಗ್ಗೆ ಮಾಹಿತಿ ಪಡೆದರು. ಅನವಶ್ಯಕವಾಗಿ ಗೈರು ಹಾಜರಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಲಿನ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಗೆ ಕೂಡ ಭೇಟಿ ನೀಡಿ ಶಾಲಾ ಕೊಠಡಿಗಳ ದುರಸ್ತಿ ಮಾಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಐ.ಜಿ. ಹೊಸಮಠ ಅವರಿಗೆ ಸೂಚಿಸಿದರು. ಹಳೆಯ ಶಾಲಾ ಕಟ್ಟಡವನ್ನು ನೆಲಸಮಗೊಳಿಸಿ ಅದೇ ಜಾಗದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಲು ನಿರ್ದೇಶನ ನೀಡಿದರು.
ಬಿಸಿಯೂಟ ಸವಿದ ಸಿಇಓ:
ತಮ್ಮ ಪ್ರವಾಸ ಕಾರ್ಯಕ್ರಮದ ಸಂದರ್ಭದಲ್ಲಿ ಸಿಇಓ ಅವರು ಶಾಲಾ ಮಕ್ಕಳ ಬಿಸಿಯೂಟದ ಅಡುಗೆ ಕೊಣೆಗು ಸಹ ಭೇಟಿ ನೀಡಿ ದಿನನಿತ್ಯ ವಿತರಿಸುತ್ತಿರುವ ಆಹಾರದ ಬಗ್ಗೆ ಪರಿಶೀಲನೆ ನಡೆಸಿದರು. ಇದೆ ವೇಳೆಯಲ್ಲಿ, ಶಾಲೆಯಲ್ಲಿ ತಯಾರಿಸಿದ ಬಿಸಿಯೂಟದ ಆಹಾರವನ್ನು ಸವಿದು ಗುಣಮಟ್ಟವನ್ನು ಪರೀಕ್ಷಿಸಿದರು.
ಗ್ರಂಥಾಲಯಕ್ಕೂ ಭೇಟಿ:
ನಂತರ ಗ್ರಾಮದಲ್ಲಿರುವ ಗ್ರಂಥಾಲಯಕ್ಕೆ ಕೂಡ ಭೇಟಿ ಮಾಡಿ, ಓದಲು ಲೈಬ್ರರಿಗೆ ಆಗಮಿಸುವವರಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸೂಚಿಸಿದರು. ಅಂಗನವಾಡಿ ಕೇಂದ್ರದ ಮಕ್ಕಳಿಗೆ ಹಾಗೂ ಶಾಲಾ ಮಕ್ಕಳಿಗೆ ಆಟವಾಡಲು ಮೈದಾನವನ್ನು ಅಭಿವೃದ್ಧಿ ಪಡಿಸಲು ಸಲಹೆ ಮಾಡಿದರು.
ಅಂಗನವಾಡಿ ಕೇಂದ್ರದ ಜಾಗವೊಂದನ್ನು ಅತಿಕ್ರಮಿಸಿ, ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್‌ನ್ನು ಕೂಡಲೇ ತೆರವುಗೊಳಿಸಲು ಇದೆ ಸಂದರ್ಭದಲ್ಲಿ ಸಿಇಓ ಅವರು ಸಂಬಅಧಿಸಿದವರಿಗೆ ಸೂಚಿಸಿ, ಬಿಸಿ ಮುಟ್ಟಿಸಿದರು. ಈ ಸಂದರ್ಭದಲ್ಲಿ ಪಿಡಿಓ, ಶಾಲಾ ಶಿಕ್ಷಕರು ಸೇರಿದಂತೆ ಇನ್ನಿತರರು ಇದ್ದರು.