ಶಾಸಕ ಯತ್ನಾಳ-ಎಂಬಿಪಿ ಮಧ್ಯೆ ಮಾತಿಲ್ಲ, ಎಷ್ಟು ತಿಂಗಳಾಯಿತು ಮಾತು ಬಿಟ್ಟು?
ಸರಕಾರ್ ನ್ಯೂಸ್ ವಿಜಯಪುರ
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಧ್ಯೆ ಮಾತುಕತೆ ಬಂದ್ ಆಗಿದೆಯಂತೆ !
ಹೌದು, ಕಳೆದ ಆರು ತಿಂಗಳಿಂದ ಒಬ್ಬರಿಗೊಬ್ಬರು ಭೇಟಿಯಾಗಿಲ್ಲ, ಫೋನ್ ಮಾಡಿಲ್ಲ, ಪರಸ್ಪರ ಮಾತುಕತೆ ನಡೆದಿಲ್ಲವೆಂಬ ಕುತೂಹಲಕಾರಿ ಅಂಶ ಬಯಲಾಗಿದೆ.
ಖುದ್ದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೇ ಇದ್ದನ್ನು ಉಲ್ಲೇಖಿಸಿದ್ದು, ಆರು ತಿಂಗಳಿಂದ ತಮ್ಮ ಮತ್ತು ಎಂ.ಬಿ. ಪಾಟೀಲ ಮಧ್ಯೆ ಮಾತಿಲ್ಲ ಎಂದಿದ್ದಾರೆ.
ಅಂದ ಹಾಗೆ ಈ ವಿಷಯ ಉಲ್ಲೇಖಿಸಲು ಕಾರಣ ಏನು ಗೊತ್ತಾ?
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಂ.ಬಿ. ಪಾಟೀಲ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರಸ್ಪರ ಹೊಂದಾಣಿಕೆಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಅವರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಆಮ್ ಆದ್ಮಿ ಪಕ್ಷ ಆರೋಪ ಮಾಡಿತ್ತು. ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಪ್ರಶ್ನಿಸುತ್ತಿದ್ದಂತೆ ಯತ್ನಾಳ, ಆಮ್ ಆದ್ಮಿ ಹೇಳಿದ್ದರಲ್ಲಿ ಅರ್ಥವಿಲ್ಲ. ಆ ಕಸಬರಿಗೆ ಪಕ್ಷ ಹೇಳಿ ಈಗ ಎಲ್ಲಿ ಹೋಗಿದೆ? ಎಷ್ಟು ಸ್ಥಾನದಲ್ಲಿ ಗೆಲುವು ಸಾಧಿಸಿದೆ ಗೊತ್ತಲ್ಲ! ಎಂದರು.
ಅಲ್ಲದೇ, ಎಂ.ಬಿ. ಪಾಟೀಲ ರಾಜ್ಯ ನಾಯಕರು. ನಾನೊಬ್ಬ ಶಾಸಕ. ನಮ್ಮ ಪಕ್ಷದಲ್ಲಿ ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿದ್ದೇವೆ. ಕಾಂಗ್ರೆಸ್‌ನಲ್ಲಿಯೇ ಗೊಂದಲ ಆಗಿದೆ ಎಂದರು.
ಇನ್ನು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಾನಗಳು ಕುಸಿಯಲು ಅವೈಜ್ಞಾನಿಕವಾಗಿ ವಾರ್ಡ್ ವಿಂಗಡಿಸಿರುವುದೇ ಕಾರಣ ಮತ್ತು ಮೀಸಲಾತಿಯನ್ನು ತಮಗೆ ಬೇಕಾದಂತೆ ತಿರುಚಿದ್ದಾರೆಂದು ಆರೋಪಿಸಿರುವ ಎಂ.ಬಿ. ಪಾಟೀಲರ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ, ಈ ಹಿಂದೆ ಅವರು ಅಧಿಕಾರದಲ್ಲಿದ್ದಾಗ ಎಲ್ಲವೂ ಪ್ರಾಮಾಣಿಕವಾಗಿತ್ತಾ? ಹಾಗಂತ ನಾವು ತಪ್ಪು ಮಾಡಿಲ್ಲ. ಪ್ರಾಮಾಣಿಕವಾಗಿ ವಾರ್ಡ್ ಪುನರ್ ವಿಂಗಡಣೆ ಮಾಡಿದ್ದೇವೆ. ಮೀಸಲಾತಿ ವಿಚಾರ ಆಯೋಗಕ್ಕೆ ಬಿಟ್ಟಿದ್ದು. ಅದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ ಎಂದರು.
ವಾರ್ಡ್ ವಿಂಗಡಣೆ ಹಾಗೂ ಮೀಸಲಾತಿ ಅವೈಜ್ಞಾನಿಕವಾಗಿದ್ದರೆ ಎಂ.ಬಿ. ಪಾಟೀಲ ಪ್ರತಿಭಟನೆ ಮಾಡಬೇಕಿತ್ತು. ಹೈಕೋರ್ಟ್ ಮೆಟ್ಟಿಲೇರಬೇಕಿತ್ತು. ಅವರದ್ದೇ ಪಕ್ಷದರು ಹೈಕೋರ್ಟ್‌ಗೆ ಹೋಗಿದ್ದರಲ್ಲ, ಏನಾಯಿತು? ಎಂದರು. ಇನ್ನು ಮತಪಟ್ಟಿಯಿಂದ ಎಲ್ಲ ವರ್ಗದವರ ಹೆಸರು ತಪ್ಪಿರುವುದು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇನೆ ಎಂದರು.
ಶಾಸಕ ಅಭಯ ಪಾಟೀಲ ಮಾತನಾಡಿ, ನಗರ ಶಾಸಕರ ಅಭಿವೃದ್ಧಿ ಕಾರ್ಯಗಳು ಹಾಗೂ ಪಕ್ಷದ ಸಾಧನೆ ಮತ್ತು ಹಿಂದುತ್ವವೇ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಲಭಿಸಲು ಕಾರಣ ಎಂದರು.
ಕುಡಚಿ ಶಾಸಕ ಪಿ.ರಾಜೀವ, ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಚಂದ್ರಶೇಖರ ಕವಟಗಿ, ಮಲ್ಲಿಕಾರ್ಜುನ ಜೋಗೂರ, ವಿಜಯ ಜೋಶಿ ಮತ್ತಿತರರಿದ್ದರು.