ತಳವಾರ ಮಹಾಸಭಾದಿಂದ ಖಡಕ್ ಸಂದೇಶ, ಗೊಡ್ಡು ಬೆದರಿಕೆಗೆ ಹೆದರದಿರಿ, ಸರ್ಕಾರದ ಆದೇಶ ಪಾಲಿಸಿ…!
ಸರಕಾರ್ ನ್ಯೂಸ್ ವಿಜಯಪುರ
ಕೇಂದ್ರ ಮತ್ತು ರಾಜ್ಯ ಸರ್ಕಾರ ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿ ಆದೇಶಿಸಿದ್ದು, ಆ ಪ್ರಕಾರ ಎಸ್‌ಟಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ, ಕೆಲವು ಕಿಡಿಗೇಡಿಗಳು ಅಧಿಕಾರಿಗಳಿಗೆ ಬೆದರಿಕೆ ಹಾಕುವ ಪ್ರಯತ್ನ ನಡೆಸಿದ್ದು, ಯಾವುದೇ ಕಾರಣಕ್ಕೂ ಅಧಿಕಾರಿಗಳು ಗೊಡ್ಡು ಬೆದರಿಕೆಗೆ ಹೆದರುವ ಅಗತ್ಯವಿಲ್ಲ. ತಳವಾರ ಸಮಾಜ ತಮ್ಮೊಂದಿಗಿದೆ ಎಂದು ತಳವಾರ ಮಹಾಸಭಾ ಜಿಲ್ಲಾ ಘಟಕ ಖಡಕ್ ಸಂದೇಶ ರವಾನಿಸಿದೆ.
ಈಗಾಗಲೇ ರಾಜ್ಯಾದ್ಯಂತ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಇದನ್ನು ಸಹಿಸದ ಕೆಲವು ಕಿಡಿಗೇಡಿಗಳು ಇಲ್ಲಸಲ್ಲದ ಹೇಳಿಕೆ ನೀಡುತ್ತಾ, ಅಧಿಕಾರಿಗಳಲ್ಲಿ ಗೊಂದಲ ಸೃಷ್ಟಿಸುತ್ತಾ, ಸಮಾಜದ ಸ್ವಾಸ್ಥೃ ಕೆಡಿಸುವ ಕೃತ್ಯದಲ್ಲಿ ತೊಡಗಿಸಿಕೊಂಡಿವೆ. ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಅದನ್ನು ಧಿಕ್ಕರಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆದಿದ್ದು, ಯಾವುದೇ ಕಾರಣಕ್ಕೂ ಅಂಥ ಕುತಂತ್ರಿಗಳ ಮಾತಿಗೆ ಕಿವಿಕೊಡಬಾರದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸರ್ಕಾರದ ಆದೇಶದಲ್ಲಿ ಏನಿದೆ?
ತಳವಾರ ಸಮುದಾಯವನ್ನು ನಾಯಕ ಮತ್ತು ನಾಯಕಡ ಸಮುದಾಯಗಳ ಪರ್ಯಾಯ ಪದ ಎಂದು ಪರಿಗಣಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಆ ಪ್ರಕಾರ ರಾಜ್ಯ ಸರ್ಕಾರ ಪ್ರವರ್ಗ-1 ರ ಪಟ್ಟಿಯಲ್ಲಿರುವ ಕ್ರಮ ಸಂಖ್ಯೆ 88(ಎಚ್)ನಲ್ಲಿರುವ ತಳವಾರ ಹಾಗೂ 88(ಕೆ)ನಲ್ಲಿರುವ ಪರಿವಾರ ಜಾತಿಗಳನ್ನು ಅಳಿಸಿಹಾಕಿ ಪರಿಶಿಷ್ಟ ಪಂಗಡದ ನಾಯಕ ಮತ್ತು ನಾಯಕಡ ಸಮುದಾಯದ ಪರ್ಯಾಯ ಪದ ಎಂದು ಪರಿಗಣಿಸಿ 2020 ಮಾ.20ರಂದು ಆದೇಶಿಸಿದೆ. ಅದರಂತೆ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ತಳವಾರ ಪದವನ್ನು ಅಳಿಸಿ ಹಾಕಿದ್ದಲ್ಲದೇ ಖುದ್ದು ಮುಖ್ಯಮಂತ್ರಿಗಳೇ 2022 ಅ.30ರಂದು ಕಲಬುರಗಿಯಲ್ಲಿ ನಡೆದ ಹಿಂದುಳಿದ ವರ್ಗಗಳ ಮೋರ್ಚಾದ ವಿರಾಟ ಸಮಾವೇಶದಲ್ಲಿ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ ಎಂದರು.
ಗೊಂದಲದ ಹೇಳಿಕೆಗೆ ಕಿವಿಗೊಡದಿರಿ:
ಅಂಬಿಗ, ಕೋಲಿ, ಕಬ್ಬಲಿಗ, ಗಂಗಾಮತ ಸಮುದಾಯದಲ್ಲೂ ಮತ್ತೆ ವಾಲ್ಮೀಕಿ, ನಾಯಕ, ನಾಯಕ್ಡ ಮತ್ತಿತರ ಸಮುದಾಯದಲ್ಲೂ ತಳವಾರ ಇದ್ದಾರೆ ಎಂಬುದು ಕೆಲವರ ವಾದ. ವಾಸ್ತವದಲ್ಲಿ ತಳವಾರ ಎಂಬುದು ಯಾವುದೇ ಪಂಗಡಗಳಿಗೆ ಸೇರ್ಪಡೆಯಾಗದೆ ಅದೊಂದು ಸ್ವತಂತ್ರ ಪದ ಎಂದು ತಳವಾರ ಮಹಾಸಭಾದ ಮುಖಂಡರು ದಾಖಲೆಗಳನ್ನು ಬಿಡುಗಡೆಗೊಳಿಸಿದರು. ಆ ಪ್ರಕಾರ ಕೋಲಿ, ಕಬ್ಬಲಿಗ, ಅಂಬಿಗ ಹಾಗೂ ಗಂಗಾಮತ ಸಮಾಜವನ್ನು ಎಸ್‌ಟಿಗೆ ಸೇರ್ಪಡೆಗೊಳಿಸಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ರವಾನೆಯಾದ ಪ್ರತ್ಯೇಕ ಪ್ರಸ್ತಾವನೆಲ್ಲಿ ತಳವಾರ ಪದ ಇಲ್ಲ. ಇನ್ನು ಅಂಬಿಗರ ಚೌಡಯ್ಯ ನಿಗಮದಲ್ಲೂ ತಳವಾರ ಇಲ್ಲ. ಹೀಗಾಗಿ ತಳವಾರ ಎಂಬುದು ಸ್ವತಂತ್ರವಾಗಿದ್ದು, ಇದೀಗ ನಾಯಕ ಮತ್ತು ನಾಯಕ್ಡ ಸಮುದಾಯಗಳ ಪರ್ಯಾಯ ಪದವಾಗಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಿದೆ. ಹೀಗಾಗಿ ತಳವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡುವ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಅಧಿಕಾರಿಗಳು ಯಾವುದೇ ಗೊಡ್ಡು ಬೆದರಿಕೆಗೆ ಹೆದರುವ ಅಗತ್ಯವಿಲ್ಲ. ಇಡೀ ಸಮಾಜ ತಮ್ಮೊಂದಿಗಿದೆ ಎಂದು ಅಭಯಹಸ್ತ ನೀಡಿದರು.
ತಳವಾರ ಮಹಾಸಭಾದ ಮುಖಂಡರಾದ ಶರಣಪ್ಪ ಕಣಮೇಶ್ವರ, ಪ್ರಕಾಶ ಸೊನ್ನದ, ಸಾಹೇಬಗೌಡ ಬಿರಾದಾರ, ಭರತ ಕೋಳಿ, ಅಂಬಣ್ಣ ಕಲ್ಲಿಮನಿ, ಎಸ್.ಎ. ದೇಗಿನಾಳ, ಶ್ರೀಮಂತ ತಳವಾರ, ಬಿಜೆಪಿ ಮುಖಂಡ ವಿವೇಕಾನಂದ ಡಬ್ಬಿ, ಗುರು ತಳವಾರ, ನಾಗು ಹೊಳೆಪ್ಪಗೋಳ, ಶಂಕರ ವಾಲೀಕಾರ, ಸಂಗಮೇಶ ಕೋಲಕಾರ ಮತ್ತಿತರರಿದ್ದರು.