ನಮ್ಮ ವಿಜಯಪುರ

ಖಾಕಿ ಪಡೆಯ ಮಿಂಚಿನ ಕಾರ್ಯಾಚರಣೆ, ಕೆಲವೇ ಗಂಟೆಗಳಲ್ಲಿ ಸಿಕ್ಕಿತು ಚಿನ್ನಾಭರಣ !!!

ಸರಕಾರ ನ್ಯೂಸ್ ವಿಜಯಪುರ

ಖಾಕಿ ಪಡೆಯ ಮಿಂಚಿನ ಕಾರ್ಯಾಚರಣೆ ಫಲವಾಗಿ ಮಿಸ್ ಆಗಿದ್ದ ಬೆಲೆ ಬಾಳುವ ಚಿನ್ನಾಭರಣ ಕೆಲವೇ ಗಂಟೆಗಳಲ್ಲಿ ವಾರಸುದಾರರ ಕೈ ಸೇರಿದೆ.

ವಿಜಯಪುರದ ರೈಲ್ವೆ ನಿಲ್ದಾಣದಿಂದ ಆಟೋ ಹತ್ತಿ ಬಸ್ ನಿಲ್ದಾಣಕ್ಕೆ ಬಂದಿಳಿದಿದ್ದ ದಂಪತಿ ಚಿನ್ನ ಹಾಗೂ ಬೆಳಿ ಆಭರಣ ಇರುವ ಬ್ಯಾಗ್ ಆಟೋದಲ್ಲಿಯೇ ಬಿಟ್ಟು ಹೋಗಿದ್ದರು. ಬಳಿಕ ಅರಿವಾಗಿ ಕಣ್ಣೀರು ಸುರಿಸಿದ್ದರು. ಆದರೆ, ಸಿಪಿಐ ಮಹಾಂತೇಶ ದ್ಯಾಮಣ್ಣವರ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಚಿನ್ನಾಭರಣ ಪತ್ತೆ ಹಚ್ಚಿ ದಂಪತಿಗೆ ‌ನೀಡಿದ್ದು, ಆ ದಂಪತಿ ತುಂಬು ಹೃದಯದಿಂದ ಕೃತಜ್ಞತೆ ಸಲ್ಲಿಸಿದ್ದಾರೆ.

ಅಂದಹಾಗೆ ಆ ಚಿನ್ನಾಭರಣ ಕಳೆದುಕೊಂಡ ದಂಪತಿ ಯಾರು? ಹೇಗಾಯಿತು? ಎಂಬ ಪ್ರಶ್ನೆಯೇ ಹಾಗಿದ್ದರೆ ಈ ವಿವರ ನೋಡಿ.

ಜೈನಾಪುರ ಗ್ರಾಮದ ಸಂಗೀತಾ ರವೀಂದ್ರ ಯರನಾಳ ಎಂಬುವರೇ ಚಿನ್ನಾಭರಣದ ವಾರಸುದಾರರು. ಗುರುವಾರ ರೈಲ್ವೆ ನಿಲ್ದಾಣದಿಂದ ಆಟೋದಲ್ಲಿ ಬರಬೇಕಾದರೆ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಬ್ಯಾಗ್ ಆಟೋದಲ್ಲಿಯೇ ಬಿಟ್ಟಿದ್ದಾರೆ. ಬಳಿಕ ಆಟೋ ಚಾಲಕ ಮನೆಗೆ ಹೋಗಿದ್ದಾ‌ನೆ. ಗಾಂಧಿ ಚೌಕ್ ಠಾಣೆಗೆ ಬಂದು ಅಳಲು ತೋಡಿಕೊಂಡ ದಂಪತಿಯ ಸ್ಥಿತಿಗೆ ಮರುಗಿದ ಪೊಲೀಸರು ಸಿಸಿ ಟಿವಿ ದೃಶ್ಯಾವಳಿ ಆಧರಿಸಿ, ಆಟೋ ನಂಬರ್ ಪಡೆದು, ಅದರ ವಿವರ ಕಲೆ ಹಾಕಿ, ಆಟೋ ಚಾಲಕನ ಮನೆಗೆ ಹೋಗಿ ಬ್ಯಾಗ್ ಪಡೆದಿದ್ದಾರೆ. ಆಟೋ ಚಾಲಕ ಸಹ ಯಥಾವತ್ತಾಗಿ ಆ ಬ್ಯಾಗ್ ಕಾಯ್ದಿರಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ. ಹೀಗಾಗಿ ಚಿನ್ನಾಭರಣ ದಂಪತಿಗೆ ಒಪ್ಪಿಸುವ ಸಂದರ್ಭದಲ್ಲಿಯೇ ಆಟೋ ಚಾಲಕನನ್ನು ಪೊಲೀಸರು ಸನ್ಮಾನಿಸಿದ್ದಾರೆ.

ಅಪರಾಧ ವಿಭಾಗದ ಸಿಬ್ಬಂದಿಗಳಾದ ಅನಿಲ್ ದೊಡ್ಡಮನಿ, ರಾಜು ನಾಯಕ, ರಾಮನಗೌಡ ಬಿರಾದಾರ, ಬಾಬು ಗುಡಿಮಣಿ ಹಾಗೂ ಸಿದ್ದು ಬಿರಾದಾರ್ ಮತ್ತು ಸಿಸಿಟಿವಿ ಕಮಾಂಡ್ ಸೆಂಟರ್ನ ಸಿಬ್ಬಂದಿ ಗಿರೀಶ್ ಬ್ಯಾಕೋಡ್ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!