ನಮ್ಮ ವಿಜಯಪುರ

ಕೃಷಿ ಪಂಪ್ ಸೆಟ್‌ಗೆ ಮೀಟರ್ ಅಳವಡಿಕೆ ಖಂಡಿಸಿ ರೈತರ ಪ್ರತಿಭಟನೆ

ವಿಜಯಪುರ: ಕೃಷಿ ಪಂಪ್ ಸೆಟ್‌ಗೆ ಆಧಾರ್ ಜೋಡಣೆ ಹಾಗೂ ಮೀಟರ್ ಅಳವಡಿಕೆ ನೀತಿ ಕೂಡಲೇ ಕೈ ಬಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಹೆಸ್ಕಾಂ ಅಧೀಕ್ಷಕ ಅಭಿಯಂತರ ಕಚೇರಿ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಹೆಸ್ಕಾಂ ಅಭಿಯಂತರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಎಸ್.ಬಿ. ಕೆಂಬೋಗಿ ಮಾತನಾಡಿ, ರೈತರ ಕಷ್ಟಕ್ಕೆ ಯಾವುದೇ ರಾಜಕೀಯ ಪಕ್ಷಗಳು ಸ್ಪಂದಿಸುತ್ತಿಲ್ಲ. ಅವರ ಆಸಕ್ತಿಗಳೆಲ್ಲ ಕಾರ್ಪೋರೇಟ್ ಕಂಪನಿಗಳ ಪರ. ಈ ಕೃಷಿ ವಲಯಕ್ಕೆ ಕಿಂಚಿತ್ತು ಲಾಭವಾಗಬಾರದೆಂದು ನಡೆಸುತ್ತಿರುವ ಪ್ರಯತ್ನ ಇಲ್ಲಿಗೆ 77 ವರ್ಷದಿಂದ ನಡೆದು ಕೊಂಡು ಬಂದಾಗಿದೆ. ರೈತ ಕೃಷಿಯಿಂದ ವರಮಾನ ಇಲ್ಲದೇ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈಗ ಸರ್ಕಾರ ಮತ್ತೆ ವಿದ್ಯುತ್ ಖಾಸಗಿಕರಣದ ಕಡೆಗೆ ಹೊರಟಿದೆ ಎಂದು ಆರೋಪಿಸಿದರು. ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ ಮಾತನಾಡಿ, ರೈತರಿಗೆ ಉಚಿತವಾಗಿ ವಿದ್ಯುತ್ ಪೂರೈಸುವುದು ಆಳುವ ವರ್ಗದ ಕರ್ತ್ಯವ್ಯ. ಆದರೆ, ಸಕಾಲಕ್ಕೆ ವಿದ್ಯುತ್ ಪೂರೈಸದ ಸರ್ಕಾರ ಇದೀಗ ಇರುವ ವಿದ್ಯುತ್ ವ್ಯವಸ್ಥೆಗೂ ಕೊಕ್ಕೆ ಹಾಕುತ್ತಿದೆ ಎಂದರು.
ರಾಜ್ಯದಲ್ಲಿ ಅಂದಾಜು 30 ಲಕ್ಷ ಕೃಷಿ ಪಂಪ್‌ಸೆಟ್‌ಗಳಿವೆ. ಒಮ್ಮೆ ಸುಟ್ಟರೆ ರಿಪೇರಿಗೆಂದು ಅಂದಾಜು 8 ಸಾವಿರ ರೂಪಾಯಿ ಖರ್ಚಾಗಲಿದೆ. ಈಗಾಗಲೇ ರೈತ ಪಂಪ್‌ಸೆಟ್‌ಗಳಿಗಾಗಿ ಅಪಾರ ಹಣ ಖರ್ಚು ಮಾಡುತ್ತಿದ್ದಾನೆ. ಅಂದಾಜಿನ ಪ್ರಕಾರ ಪ್ರತಿ ವರ್ಷ 2400 ಕೋಟಿ ರೂಪಾಐಇ ರೈತರು ಖರ್ಚು ಮಾಡುತ್ತಿದ್ದಾರೆ. ಸದ್ಯ ರೈತರಿಗೆ ಖರ್ಚು ಮಾಡಲು ಹಣ ಇಲ್ಲ. ಹೀಗಾಗಿ ಸರ್ಕಾರವೇ ಆ ವೆಚ್ಚವನ್ನೂ ಭರಿಸಬೇಕೆಂದರು. ಜೊತೆಗೆ
ಮುಖಂಡರಾದ ಮಲ್ಲಿಕಾರ್ಜುನ ಹಾವಿನಾಳಮಠ, ರಮೇಶ ಕುಂಬಾರ, ಶರಣು ಬಿಸನಾಳ, ಗಣಪತಿ ಹೂಗಾರ, ಸುರೇಶ ಡೊಂಗ್ರೋಜಿ, ಸುರೇಶ ಬಿರಾದಾರ, ಫಯಾಜ್ ಬಾಗವಾನ, ಜಗದೇವ ರಾಠೋಡ, ಶ್ರೀಮಂತ ತೇಲಿ, ಸಂಗಪ್ಪ ತೇಲಿ, ಸರ್ದಾರ ಡೊಳ್ಳಿ, ಭೀಮರಾಯ ಭಂಟನೂರ, ಸಾಹೇಬಗೌಡ ಬಿರಾದಾರ, ಪರಶುರಾಮ ಹಿರೇಕುರುಬರ, ರಾಜು ಅಂಗಡಿ, ಸಂಜೀವಕುಮಾರ ಜವಳಗಿ, ರಾಯಗೊಂಡ ತಳವಾರ, ನರಸುಗೌಡ ಪಾಟೀಲ, ಮಹೇಶ ಪಾಟೀಲ, ರಾಜಶೇಖರ ಕುಂಬಾರ ಮತ್ತಿತರರಿದ್ದರು.

error: Content is protected !!