ನಮ್ಮ ವಿಜಯಪುರ

ಪ್ರಯಾಣಿಕರೇ ಹುಷಾರ್‌, ಬಸ್‌ನಲ್ಲಿ ಹೆಚ್ಚಿದ ಕಳ್ಳತನ ಪ್ರಕರಣ ! 45 ಗ್ರಾಂ ಚಿನ್ನಾಭರಣ ಗಾಯಾಬ್‌…!

ಸರಕಾರ್‌ ನ್ಯೂಸ್‌ ವಿಜಯಪುರ

ಗುಮ್ಮಟ ನಗರಿಯ ಖ್ಯಾತಿಯ ವಿಜಯಪುರದಲ್ಲಿ ಇತ್ತೀಚೆಗೆ ಸರಗಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದು, ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಅಂದಾಜು 1.35 ಲಕ್ಷ ರೂ.ಮೌಲ್ಯದ 45 ಗ್ರಾಂ ಚಿನ್ನಾಭರಣ ಕಳುವು ಮಾಡಲಾಗಿದೆ.

ವಿಜಯಪುರದ ಇಬ್ರಾಹಿಂಪುರ ರೈಲ್ವೆ ಗೇಟ್‌ ಹತ್ತಿರದ ನಿವಾಸಿ ಕಮಲಾಬಾಯಿ ಚಿದಾನಂದ ಗಡಗಿ ಎಂಬುವವರ ಚಿನ್ನಾಭರಣ ಎಗರಿಸಲಾಗಿದೆ. ಡಿ. 14ರಂದು ವಿಜಯಪುರದಿಂದ ತಾಂಬಾ ಕಡೆಗೆ ಹೋಗುವ ಬಸ್‌ ಏರುವಾಗ ಕಮಲಾಬಾಯಿ ತನ್ನ ವ್ಯಾನಿಟಿ ಬ್ಯಾಗ್‌ನಲ್ಲಿರಿಸಿದ್ದ ಚಿನ್ನಾಭರಣ ಕಳವು ಮಾಡಲಾಗಿದೆ. ಬಸ್‌ ಹತ್ತುವಾಗ ನೂಕು ನುಗ್ಗಲು ಉಂಟಾಗಿದೆ. ಇದೇ ವೇಳೆ ಚಿನ್ನಾಭರಣ ಎಗರಿಸಲಾಗಿದೆ. ಬಸ್‌ ಹತ್ತಿ ಸೀಟ್‌ನಲ್ಲಿ ಕುಳಿತಾಗ ಕಮಲಾಬಾಯಿ ವ್ಯಾನಿಟಿ ಬ್ಯಾಗ್‌ ಗಮನಿಸಿದ್ದು ಅದರಲ್ಲಿದ್ದ ಚಿನ್ನಾಭರಣ ಕಳುವಾಗಿತ್ತು.

ಬ್ಯಾಗ್‌ನಲ್ಲಿ 1.20 ಲಕ್ಷ ರೂ.ಮೌಲ್ಯದ 40 ಗ್ರಾಂ ತಾಳಿ ಚೈನ್‌ ಹಾಗೂ 15 ಸಾವಿರ ರೂ.ಮೌಲ್ಯದ 5 ಗ್ರಾಂ ಚಿನ್ನದ ಉಂಗುರ ಸೇರಿ ಒಟ್ಟು 1.35 ಲಕ್ಷ ರೂಪಾಯಿ ಮೌಲ್ಯದ 45 ಗ್ರಾಂ ಚಿನ್ನಾಭರಣ ಇತ್ತು. ಈ ಬಗ್ಗೆ ಕಮಲಾಬಾಯಿ ಡಿ. 20ರಂದು ಗಾಂಧಿ ಚೌಕ್‌ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!