ಜಿಪಂ ಸಿಇಒ ರಾಹುಲ್ ಸಿಂಧೆ ಪ್ರವಾಸ, ಗ್ರಾಪಂಗಳ ಕಾಮಗಾರಿ ಪರಿಶೀಲನೆ
ಸರಕಾರ್ ನ್ಯೂಸ್ ವಿಜಯಪುರ
ತಾಳಿಕೋಟಿ ತಾಲೂಕಿನ ಕೊಣ್ಣೂರ ಮತ್ತು ಬಾವೂರ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಸಿಂಧೆ ಅವರು ಬುಧವಾರ ಭೇಟಿ ನೀಡಿ, ವಿವಿಧ ಯೋಜನೆಗಳ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ, ಅಗತ್ಯ ಸಲಹೆ ಸೂಚನೆ ನೀಡಿದರು.
ಕೊಣ್ಣೂರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಮಹಾತ್ಮಗಾಂಧಿ ನರೇಗಾ ಯೋಜನೆ, ಗ್ರಾಮೀಣ ವಸತಿ ಯೋಜನೆ, ಕರವಸೂಲಾತಿ, ಸ್ವಚ್ಚ ಭಾರತ ಮಿಷನ್ (ಗ್ರಾಮೀಣ) ಜಲಜೀವನ ಮಿಷನ್ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಈ ಯೋಜನೆಗಳ ಪ್ರಗತಿಯನ್ನು ನಿಗದಿತ ಕಾಲಮಿತಿಯೊಳಗೆ
ಸಾಧಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಕೊಣ್ಣೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿದ ಅವರು, ಅಲ್ಲಿನ ಸಾರ್ವಜನಿಕರೊಂದಿಗೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಹಾಗೂ ಸಿಬ್ಬಂದಿಗಳ ಕಾರ್ಯನಿರ್ವಹಣೆಯ ಮಾಹಿತಿ ಪಡೆದುಕೊಂಡು,ಸಾರ್ವಜನಿಕರೊಂದಿಗೆ ಚರ್ಚಿಸಿ, ಉತ್ತಮ ಕಾರ್ಯನಿರ್ವಹಣೆಯ ದಿಸೆಯಲ್ಲಿ ಸಾರ್ವಜನಿಕರಿಂದಲೂ ಮಾಹಿತಿ ಪಡೆದುಕೊಂಡರು.
ಅದೇ ಗ್ರಾಮದ ಸಾರ್ವಜನಿಕ ಗ್ರಂಥಾಲಯಕ್ಕೆ ತೆರಳಿ, ಸರ್ಕಾರದಿಂದ ಒದಗಿಸಿರುವ ಗಣಕಯಂತ್ರಗಳು ಸಾರ್ವಜನಿಕರಿಗೆ ಲಭ್ಯವಾಗಬೇಕು.ಅಲ್ಲಿ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಿಕೊಡಬೇಕು. ಕೇರಂ ಮತ್ತು ಚೆಸ್ ಆಟದ ಸಾಮಗ್ರಿ ಒದಗಿಸುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿ, ಅನುಪಾಲನಾ ವರದಿ ಸಲ್ಲಿಕೆಗೆ ಸೂಚಿಸಿದರು.
ಬಾವೂರ ಗ್ರಾಮ ಪಂಚಾಯತಿಯ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲಿ ಕ್ರೂಢೀಕರಿಸಿರುವ ಪ್ಲಾಸ್ಟಿಕ್ ಮತ್ತು ಒಣಕಸ ಬೇರ್ಪಡಿಸಿ, ಎರೆಹುಳು ಸಾವಯವ ಗೊಬ್ಬರ ತಯಾರಿಗೆ ಒತ್ತು ನೀಡಲು ಸೂಚಿಸಿದರು.
ಎನ್.ಆರ್.ಎಲ್.ಎಮ್ ಸಂಜೀವಿನಿ ಯೋಜನೆಯ ಸ್ವ-ಸಹಾಯ ಸಂಘದ ಸದಸ್ಯರಿಗೆ ಇದರ ಕಾರ್ಯನಿರ್ಹಣೆ ವಹಿಸಬೇಕು. ಎರೆಹುಳು ಗೊಬ್ಬರ ತಯಾರಿ ಹಾಗೂ ನಿರ್ವಹಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ವ-ಸಹಾಯ ಸಂಘದ ಸದಸ್ಯರಿಗೆ ತರಬೇತಿ ನೀಡಲು ಆದ್ಯತೆಯ ಮೇರೆಗೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಾವೂರ ಗ್ರಾಮ ಪಂಚಾಯತಿ ಕಾರ್ಯಲಯಕ್ಕೆ ಭೇಟಿ ನೀಡಿ, ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಹಾಜರಾತಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಡತ ಪರಿಶೀಲಿಸಿ, ಮಹಿಳೆಯರು ಹಾಗೂ ವಿಶೇಷ ಚೇತನರ ಭಾಗವಹಿಸುವಿಕೆ, ಆಧಾರ ಜೋಡಣೆ, ಗ್ರಾಮೀಣ ವಸತಿ ಯೋಜನೆ, ಸ್ವಚ್ಚ ಭಾರತ ಮಿಷನ್(ಗ್ರಾಮೀಣ) ಜಲಜೀವನ ಮಿಷನ್ ಯೋಜನೆ, 15ನೇ ಹಣಕಾಸಿನ ಯೋಜನೆಗಳ ಪ್ರಗತಿ ಸಾಧಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮದ ಉರ್ದು ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ರಾಹುಲ ಸಿಂಧೆ ಅವರು, ಶಾಲಾ ಕೊಠಡಿ ಹಾಗೂ ಅಡುಗೆ ಕೋಣೆ ಹಾಗೂ ನಿರ್ವಹಣೆ ಕುರಿತು ಪರಿಶೀಲಿಸಿದರು. ಶಿಕ್ಷಣ ವ್ಯವಸ್ಥೆ ಹಾಗೂ ಆಹಾರ ವಿತರಣೆ ಕುರಿತು ಸಂವಾದ ನಡೆಸಿದರು. 15ನೇ ಹಣಕಾಸಿನ ಯೋಜನೆಯಡಿ ವಿಶೇಷ ಚೇತನರಿಗಾಗಿ ಉರ್ದು ಶಾಲೆಯಲ್ಲಿ ನಿರ್ಮಿಸಿರುವ ರ್ಯಾಂಪ್ ಕಾಮಗಾರಿಯ ಪರಿಶೀಲನೆ ನಡೆಸಿದರು.
ಗ್ರಾಮೀಣ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಂಡಿರುವ ಫಲಾನುಭವಿಗಳ ಮನೆಗಳಿಗೆ ಖುದ್ದು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಈ ವೇಳೆ ತಾಳಿಕೋಟೆ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಆರ್ ಬಿರಾದಾರ, ಜಿಲ್ಲಾ ಪಂಚಾಯತಿಯ ಸಹಾಯಕ ಯೋಜನಾಧಿಕಾರಿಗಳಾದ ಅರುಣಕುಮಾರ ದಳವಾಯಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜೆ.ಪಿ ಶೆಟ್ಟಿ, ತಾಳಿಕೊಟೆ ತಾಲೂಕಿನ ಸಹಾಯಕ ನಿರ್ದೇಶಕರು (ಗ್ರಾ.ಉ) ಶ್ರೀಮತಿ ಸಾವಿತ್ರಿ ಬಿರಾದಾರ, ಕೊಣ್ಣೂರ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶಂಕರಗೌಡ ಲಿಂಗದಳ್ಳಿ, ಕೊಣ್ಣೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಅನಿಲಕುಮಾರ ಕಿರಣಗಿ, ಬಾವೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶಂಕರ ತಳವಾರ ಹಾಗೂ ಇತರರು ಇದ್ದರು.