ಮಹಾನಗರ ಲೀಸ್ ಆಸ್ತಿ ಮಾರಾಟಕ್ಕೆ ಹುನ್ನಾರ ! 364 ಆಸ್ತಿ ಖರೀದಿ ಹಾಕಲು ಪ್ರಸ್ತಾವನೆ ಸಲ್ಲಿಕೆ….ರಾಜಕಾರಣಿ-ಬಂಡವಾಳಶಾಹಿಗಳ ಲಾಬಿ?
ವಿಜಯಪುರ: ಮಹಾನಗರ ಪಾಲಿಕೆ ಲೀಸ್ ಆಸ್ತಿ ಮಾರಾಟಕ್ಕೆ ಸರ್ಕಾರ ಮುಂದಾಗಿದ್ದು, ಈಗಾಗಲೇ ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ನಗರದಲ್ಲಿ ಒಟ್ಟು 366 ಆಸ್ತಿಗಳಿದ್ದು ಪೈಕಿ ಈಗಾಗಲೇ 2 ಲೀಸ್ ಆಸ್ತಿಗಳನ್ನು ಖರೀದಿ ಹಾಕಿಕೊಡಲಾಗಿದೆ. ಬಾಕಿ ಉಳಿದ 364 ಆಸ್ತಿಗಳನ್ನು ಖರೀದಿ ಹಾಕಿಕೊಡಲು ತಯಾರಿ ನಡೆದಿದೆ ಎಂದು ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ತಿಳಿಸಿದ್ದಾರೆ.
ಈಗಾಗಲೇ ಪಾಲಿಕೆಯ ಕೆಲವು ಆಸ್ತಿಗಳನ್ನು ಮಾರಾಟ ಮಾಡಲಾಗಿದ್ದು, ಇನ್ನುಳಿದ ಆಸ್ತಿಗಳ ಮಾರಾಟಕ್ಕೆ ಸಂಬಂಧಿಸಿದಂತೆ ದಾಖಲೆಗಳ ಸಮೇತ ಸಭೆಗೆ ಹಾಜರಾಗಲು ತಿಳಿಸಲಾಗಿತ್ತು. ಆ ಪ್ರಕಾರ ಇದೀಗ ಆಸ್ತಿ ಹರಾಜು ಪ್ರಕ್ರಿಯೆಗೆ ಮುನ್ನುಡಿ ಬರೆಯುತ್ತಿರುವ ಮಾಹಿತಿ ಲಭ್ಯವಾಗಿದೆ. ಈ ಮೊದಲು 2010ರಲ್ಲಿ ಸರ್ಕಾರದ ಆದೇಶದ ಪ್ರಕಾರ 1045 ಲೀಸ್ ಆಸ್ತಿಗಳನ್ನು ಮಾರಾಟ ಮಾಡಲಾಗಿತ್ತು. ಕೇವಲ 20, 30 ರೂ.ಗೆ ಚದರ ಅಡಿಗೆ ಆಸ್ತಿ ಮಾರಾಟ ಮಾಡಿದ್ದರಿಂದ ಅಂದಿನ ಪಾಲಿಕೆ ಸದಸ್ಯರು ಸಾಮಾನ್ಯ ಸಭೆಯಲ್ಲಿ ತಗಾದೆ ತೆಗೆದಿದ್ದರು.
ಇದೀಗ 364 ಲೀಸ್ ಆಸ್ತಿಗಳ ಪೈಕಿ ಹೆಚ್ಚಿನವರು ಬಂಡವಾಳ ಶಾಹಿಗಳು ಹಾಗೂ ರಾಜಕಾರಣಿಗಳ ಹೆಸರಲ್ಲಿದ್ದು, ಅತ್ಯಂತ ಕಡಿಮೆ ದರಕ್ಕೆ ಕೋಟ್ಯಂತರ ರೂ.ಮೌಲ್ಯದ ಆಸ್ತಿ ಖರೀದಿ ಹಾಕಿಕೊಡಲಾಗುತ್ತಿದೆ. ಇದರ ಹಿಂದೆ ರಾಜಕೀಯ ಹಿತಾಸಕ್ತಿಗಳ ಕೈವಾಡವಿದೆ ಎನ್ನಲಾಗುತ್ತಿದೆ.