ವಕ್ಫ್ ಆಸ್ತಿ ಸಮಸ್ಯೆ; ಶಾಸಕ ಯತ್ನಾಳ ಹೇಳಿದ್ದೇನು?
ವಿಜಯಪುರ: ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಸರ್ಕಾರ ವಿಶೇಷ ತಂಡ ರಚಿಸಿ ಸಮೀಕ್ಷೆ ನಡೆಸಿ ಕಂದಾಯ ಇಲಾಖೆಗೆ ಜಾಗೆ ಮಂಜೂರಿಸಲು ಶಾಸಕ ಬಸನಗೌಡ ಪಾಟೀಲ ಯತ್ನಾಳ ಮನವಿ ಮಾಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರಲ್ಲಿ ಮನವಿ ಮಾಡಿದ ಅವರು, ಇಡೀ ವಿಜಯಪುರವೇ ವಕ್ಫ್ ಹೆಸರಿಗೆ ಬರೆದಂತಾಗಿದೆ. ನಗರದ ಬಹುತೇಕ ಕಡೆ ಆಸ್ತಿಗಳನ್ನು ವಕ್ಫ್ ಹೆಸರಿಗೆ ಮಾಡಲಾಗಿದೆ. ಇದಕ್ಕೆ ಈ ಹಿಂದಿನ ಜಿಲ್ಲಾಧಿಕಾರಿ ಮಹ್ಮದ್ ಮೊಹಸೀನ್ ಕಾರಣ ಎಂದರು.
ಜಿಲ್ಲಾ ಆಸ್ಪತ್ರೆ, ಪೊಲೀಸ್ ಪರೇಡ್ ಮೈದಾನ, ದರ್ಗಾ ಜೈಲ್ ಹೀಗೆ ಪ್ರಮುಖ ಜಾಗೆಗಳೆಲ್ಲವೂ ವಕ್ಫ್ ಹೆಸರಲ್ಲಿವೆ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಈ ಬಗ್ಗೆ ಗಮನ ಹರಿಸಿ ವಕ್ಫ್ ಆಸ್ತಿಯನ್ನು ಕಂದಾಯ ಆಸ್ತಿಯನ್ನಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದರು.
ಇದಕ್ಕೆ ಸಚಿವ ಉಮೇಶ ಕತ್ತಿ, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳೋಣ ಎಂದರು.
ಶಾಸಕ ಡಾ.ದೇವಾನಂದ ಚವ್ಹಾಣ್, ಶಾಸಕ ಶಿವಾನಂದ ಪಾಟೀಲ, ಶಾಸಕ ರಮೇಶ ಭೂಸನೂರ, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮತ್ತಿತರರಿದ್ದರು.