ಲಿಂಬೆ ನಾಡಿನ ಶೈಕ್ಷಣಿಕ ಗುಣಮಟ್ಟಕ್ಕೆ ಹೊಡೆತ, ಸರ್ಕಾರಿ ಕಾಲೇಜ್‌ಗಳಲ್ಲಿ ಸೌಕರ್ಯಗಳ ಕೊರತೆ
ಸರಕಾರ್ ನ್ಯೂಸ್ ಇಂಡಿ
ಲಿಂಬೆ ನಾಡು ಇಂಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಮೂಲ ಸೌಕರ್ಯಗಳು ಹಾಗೂ ಬೋಧಕ ಮತ್ತುಬೋಧಕೇತರ ಸಿಬ್ಬಂದಿಯಿಂದ ನರಳುತ್ತಿದ್ದು, ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ಇಂಡಿ ವಿಧಾನ ಸಭೆ ಕ್ಷೇತ್ರದಲ್ಲಿ ಒಟ್ಟು 5 ಸರಕಾರಿ ಪದವಿ ಪೂರ್ವ ಕಾಲೇಜ್‌ಗಳು ಕಾರ್ಯನಿರ್ವಹಿಸುತ್ತಿವೆ. ಚಡಚಣ ತಾಲೂಕಿನ ಝಳಕಿ, ಇಂಡಿ ತಾಲೂಕಿನ ಗೊಳಸಾರ, ಲಚ್ಯಾಣ, ಹಳಗುಣಕಿ ಹಾಗೂ ಇಂಡಿ ಪಟ್ಟಣದಲ್ಲಿ ಕಾಲೇಜ್‌ಗಳಿದ್ದು ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಬೋಧಕ ಸಿಬ್ಬಂದಿ ಇಲ್ಲದಿರುವುದು ತೊಂದರೆಗೆ ಕಾರಣ.
ಝಳಕಿ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಸೇರಿ ಒಟ್ಟು 537 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 2 ಬೋಧಕೇತ ಸಿಬ್ಬಂದಿ ಹುದ್ದೆ ಖಾಲಿ ಇವೆ. ಗೋಳಸಾರದಲ್ಲಿ 240 ವಿದ್ಯಾರ್ಥಿಗಳಿದ್ದು 3 ಬೋಧಕೇತರ ಸಿಬ್ಬಂದಿ ಹುದ್ದೆ ಖಾಲಿ ಇವೆ, ಲಚ್ಯಾಣದಲ್ಲಿ 239 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು 2 ಹುದ್ದೆ ಖಾಲಿ ಇವೆ. ಲಚ್ಯಾಣದಲ್ಲಿ 239 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು 2 ಹುದ್ದೆ ಖಾಲಿ ಇವೆ. ಹಳಗುಣಕಿಯಲ್ಲಿ 112 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು 1 ಹುದ್ದೆ ಖಾಲಿ ಇದೆ. ಇಂಡಿಯಲ್ಲಿ591 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಎಲ್ಲ ಹುದ್ದೆಗಳು ಭರ್ತಿ ಇದ್ದುಮೂಲ ಸೌಕರ್ಯದ ಕೊರತೆ ಎದ್ದು ಕಾಣಿಸುತ್ತಿದೆ.
ಸರಕಾರದ ಕ್ರಮ ಏನು?
2022-23ನೇ ಸಾಲಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜ್ ಇಂಡಿಗೆ 170 ಲಕ್ಷ ರೂ.ಅಂದಾಜು ಮೊತ್ತಕ್ಕೆ 2 ತರಗತಿ ಕೊಠಡಿ, 2 ಪ್ರಯೋಗಾಲಯ ಕೊಠಡಿ, 2 ಶೌಚಾಲಯ ಬ್ಲಾಕ್‌ಗಳ ಕಟ್ಟಡ ನಿರ್ಮಾಣಕ್ಕೆ ನಬಾರ್ಡ್ ಸಹಯೋಗದ ಆರ್‌ಐಡಿಎಫ್-28ರಡಿ ಕಾಮಗಾರಿ ಕೈಗೊಳ್ಳುವ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇನ್ನೂ ಪರಿಶೀಲನೆ ಹಂತದಲ್ಲಿದೆ.
ಸರ್ಕಾರದ ಆದೇಶ ಸಂಖ್ಯೆ ; ಇಪಿ 217 ಯೋಸಕ 2022 ದಿನಾಂಕ 21/07/2022ರಲ್ಲಿ 2022-23ನೇ ಸಾಲಿನಲ್ಲಿ ವಿವೇಕ ಯೋಜನೆಯಡಿ ಪದವಿ ಪೂರ್ವ ಕಾಲೇಜ್‌ಗಳಲ್ಲಿ 1500 ಎಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ. ಸದರಿ ಆದೇಶದನ್ವಯ ಝಳಕಿ ಕಾಲೇಜ್‌ಗೆ -4, ಗೊಳಸಾರ-3, ಹಳಗುಣಕಿ-3 ಹಾಗೂ ಇಂಡಿ ಕಾಲೇಜ್‌ಗೆ -4 ಕೊಠಡಿಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಇನ್ನೂ ಪರಿಶೀಲನೆ ಹಂತದಲ್ಲಿದೆ.
ಸದ್ಯಕ್ಕೆ ಪಾಠ ಪ್ರವಚನಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತಿದೆಯಾದರೂ ನಿಯೋಜನೆ ಮೇರೆಗೆ ಬೇರೆ ಇಲಾಖೆಗೆ ತೆರಳುತ್ತಿರುವ ಸಿಬ್ಬಂದಿಗೆ ಕಡಿವಾಣ ಹಾಕಿದ್ದೇ ಆದಲ್ಲಿ ಆ ಎಲ್ಲ ಸಮಸ್ಯೆಗಳು ಪರಿಹಾರಗೊಳ್ಳಲಿವೆ ಎಂಬುದು ಶಿಕ್ಷಣ ಪ್ರೇಮಿಗಳ ಆಶಯ.