ಬಾಲಮಂದಿರಗಳಿಂದ ಮಕ್ಕಳು ನಾಪತ್ತೆ, ಐದು ವರ್ಷದಲ್ಲಿ 484 ಮಕ್ಕಳು ಕಾಣೆ !
ಸರಕಾರ್ ನ್ಯೂಸ್ ಬೆಂಗಳೂರ
ಸರಕಾರಿ ಬಾಲಮಂದಿರಗಳಿಂದ ಮಕ್ಕಳು ನಾಪತ್ತೆಯಾಗುತ್ತಿರುವ ಪ್ರಕರಣಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಠಿಸಿವೆ !
ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 484 ಮಕ್ಕಳು ಕಾಣೆಯಾಗಿದ್ದು, ಈ ಕುರಿತು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಗಿದೆ. ಅದರಲ್ಲಿ 365 ಮಕ್ಕಳನ್ನು ಪತ್ತೆ ಹೆಚ್ಚಿ ಅಗತ್ಯ ಪುನರ್ವಸತಿ ಕಲ್ಪಿಸಲಾಗಿದೆ. ಉಳಿದ 119 ಮಕ್ಕಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಬಾಲ ಮಂದಿರಗಳಿಂದ ಕಾಣೆಯಾದ ಮಕ್ಕಳ ಬಗ್ಗೆ ನ್ಯಾಶನಲ್ ಕಮೀಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್ (ಎನ್‌ಸಿಪಿಸಿಆರ್) ಇವರಿಂದ ಹೊರಡಿಸಿರುವ ಕಾರ್ಯವಿಧಾನದಲ್ಲಿ ತಿಳಿಸಿರುವಂತೆ ಸಂಬಂಧಿಸಿದ ಸ್ಥಳೀಯ ಠಾಣೆಯಲ್ಲಿ ದೂರು ನೀಡಿ ಎಫ್‌ಐಆರ್ ದಾಖಲಿಸಲಾಗಿದೆ.
ಮಕ್ಕಳನ್ನು ಪತ್ತೆ ಹೆಚ್ಚುವ ಕುರಿತು ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಾದರಿ ನಿಯಮಗಳು, 2016 ನಿಯಮ 92 ರಲ್ಲಿ ವಿವರಿಸಿರುವಂತೆ ಪೊಲೀಸ್ ಇಲಾಖೆಯಿಂದ ಮಕ್ಕಳನ್ನು ಪತ್ತೆ ಹಚ್ಚಲು ಕ್ರಮ ವಹಿಸಲಾಗಿದೆ. ಅಲ್ಲದೇ, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು, ಬಾಲ ಮಂದಿರದ ಸಿಬ್ಬಂದಿಗಳು, ಸ್ಥಳೀಐ ಸ್ವಯಂ ಸೇವಾ ಸಂಸ್ಥೆಯ ನೆರವಿನೊಂದಿಗೆ ಮಕ್ಕಳನ್ನು ಹುಡುಕುವ ಕಾರ್ಯ ಮುಂದುವರಿಸಲಾಗಿದೆ.
ಸರಕಾರ ಕೈಗೊಂಡ ಕ್ರಮಗಳು:
ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಣಿಕೆ ತಡೆಗಟ್ಟುವಿಕೆಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿಗಳನ್ನು ರಚಿಸಲಾಗಿದೆ. ಸದರಿ ಸಮಿತಿ ಸ್ಟೇಟ್ ನ್ಸ್‌ಟಿಟ್ಯೂಟ್ ಆಫ್ ರೂರಲ್ ಡೆವೆಲೋಪಮೆಂಟ್ ಮೂಲಕ 2022 ಜೂ.30ರಂದು ಯುಟ್ಯೂಬ್ ಮೂಲಕ ತರಬೇತಿ ನೀಡಲಾಗಿದೆ.
ಸಾಗಾಣಿಕೆಗೆ ತುತ್ತಾಗಬಹುದಾದ ಹಾಗೂ ಸಾಗಾಣಿಕೆಗೆ ಒಳಪಟ್ಟ ಮಹಿಳೆಯರ ಹಾಗೂ ಮಕ್ಕಳ ರಕ್ಷಣೆ, ಪುನರ್ವಸತಿಗಾಗಿ ಕೇಂದ್ರ ಪುರಸ್ಕೃತ ಉಜ್ವಲ ಯೋಜನೆಯನ್ನು 11ಜಿಲ್ಲೆಗಳಲ್ಲಿ 15 ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅನುಷ್ಟಾನಗೊಳಿಸಲಾಗುತ್ತಿದೆ.
ಕೈಪಿಡಿ, ಬಿತ್ತಿ ಪತ್ರ, ಸಾಕ್ಷಚಿತ್ರ ಇತ್ಯಾದಿಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ದೂರದರ್ಶನ ವಾಹಿನಿಯಲ್ಲಿ ಸಂವಾದ ಏರ್ಪಡಿಸಲಾಗುತ್ತಿದೆ. ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ. ಆದಾಗ್ಯೂ ಸರಕಾರ ಮಕ್ಕಳ ನಾಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.