ಕಾಂಗ್ರೆಸ್ ವಿರುದ್ಧ ತಳವಾರರ ಆಕ್ರೋಶ, ಎಸ್ ಟಿ ಪ್ರಮಾಣ ಪತ್ರ ತಡೆಗೆ ಹುನ್ನಾರ, ನಿಜಾಂಶ ಅರಿಯಿರಿ ಎಂದ ಶರಣಪ್ಪ ಸುಣಗಾರ
ಸರಕಾರ ನ್ಯೂಸ್ ಬೆಂಗಳುರು
ತಳವಾರ ಮತ್ತು ಪರಿವಾರ ಸಮುದಾಯನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿರುವುದನ್ನು ಸಹಿಸಲಾಗದ ಕೆಲವು ದುಷ್ಟ ಶಕ್ತಿಗಳು ನಡೆಸುತ್ತಿರುವ ಕುತಂತ್ರಕ್ಕೆ ಕಿವಿಗೊಡಬಾರದು ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ಸಿಎಂ ಸಿದ್ದರಾಮಯ್ಯ ಗೆ ಆಗ್ರಹಿಸಿದ್ದಾರೆ.
ಎಸ್ ಟಿ ಪ್ರಮಾಣ ಪತ್ರ ತಡೆಹಿಡಿಯಲು ನಡೆಸುತ್ತಿರುವ ನಿರಂತರ ಹುನ್ನಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಕಿವಿಗೊಡುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಸಾಕಷ್ಟು ಗುಸುಗುಸು ಕೇಳಿ ಬರುತ್ತಿದ್ದು ಕಾಂಗ್ರೆಸ್ ವಿರುದ್ಧ ತಳವಾರರ ಆಕ್ರೋಶ ಮತ್ತೆ ಭುಗಿಲೇಳತೊಡಗಿದೆ. ಹೀಗಾಗಿ ಸಮುದಾಯದ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ಕೂಲಂಕುಷವಾಗಿ ಪರಿಶೀಲಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಎಚ್ಚೆತ್ತುಕೊಂಡ ತಳವಾರ ಸಮುದಾಯ, ಹಳ್ಳಿ-ಹಳ್ಳಿಗಳಲ್ಲಿ ಜನಜಾಗೃತಿ ಸಭೆ, ಕೈಗೊಂಡ ನಿರ್ಣಯಗಳೇನು?
ಕೆಲವೇ ಕೆಲವು ಖೊಟ್ಟಿ ದಾಖಲೆಗಳನ್ನಿಟ್ಟುಕೊಂಡು ಮೂಲ ಮತ್ತು ನೈಜ ತಳವಾರರಿಗೆ ಎಸ್ ಟಿ ಪ್ರಮಾಣ ಪತ್ರ ನೀಡಕೂಡದೆಂಬ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಮಾತಿಗೆ ಸಿದ್ದರಾಮಯ್ಯ ಕಿವಿಗೊಡಬಾರದು. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಡಲು ಕಾರ್ಯಕ್ರಮ ಕೂಡ
ರೂಪಿಸಲಾಗುತ್ತಿದೆ. ಬೃಹತ್ ಜಾಥಾದ ಮೂಲಕ ಮನವಿ ಸಲ್ಲಿಸಲಾಗುತ್ತಿದೆ ಎಂದು ಶರಣಪ್ಪ ಸುಣಗಾರ ತಿಳಿಸಿದ್ದಾರೆ.
ತಳವಾರ ಸಮುದಾಯಕ್ಕೆ ಎಸ್ ಟಿ ಪ್ರಮಾಣ ಸಿಕ್ಕಿದಾಗಿನಿನಂದಲೂ ಕೆಲವರು ಅದನ್ನು ತಪ್ಪಿಸಲು ನಿರಂತರವಾಗಿ ಹುನ್ನಾರ ನಡೆಸುತ್ತಲೇ ಬಂದಿದ್ದಾರೆ. ಕೋಲಿ, ಕಬ್ಬಲಿಗ, ಗಂಗಾಮತ, ಅಂಬಿಗ ಸಮುದಾಯಗಳಲ್ಲಿಯೂ ತಳವಾರ ಇದೆ ಮತ್ತು ವಾಲ್ಮೀಕಿ, ಬೇಡ, ಬೇಡರ ಗಳಲ್ಲಿಯೂ ತಳವಾರ ಇದೆ ಎಂದು ಬಿಂಬಿಸಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಅಂಥ ತಳವಾರ ಇಲ್ಲ. ವಾಲ್ಮೀಕಿ, ಬೇಡ, ಬೇಡರ ಸಮುದಾಯದಲ್ಲಿದ್ದ ತಳವಾರರಿಗೆ ಆರಂಭದಿಂದಲೇ ಎಸ್ ಟಿ ಪ್ರಮಾಣ ಪತ್ರ ಸಿಗುತ್ತಿದೆ. ಇನ್ನುಳಿದ ವಂಚಿತ ತಳವಾರರನ್ನೂ ಪರಿವಾರ ಸಮುದಾಯದ ಜೊತೆಗೆ ಕೇಂದ್ರ ಸರ್ಕಾರ ಎಸ್ ಟಿಗೆ ಸೇರ್ಪಡೆಗೊಳಿಸಿದೆ. ಕೋಲಿ, ಕಬ್ಬಲಿಗ, ಅಂಬಿಗ, ಗಂಗಾಮತಕ್ಕೂ ಇದೀಗ ಹೊಸದಾಗಿ ಸೇರ್ಪಡೆಗೊಂಡಿರುವ ತಳವಾರ ಸಮುದಾಯಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಸಾಕಷ್ಟು ಬಾರಿ ಮನವರಿಕೆ ಮಾಡಿಕೊಡಲಾಗಿದೆ. ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಕಳುಹಿಸಲ್ಪಟ್ಟ ಕೋಲಿ, ಕಬ್ಬಲಿಗ, ಅಂಬಿಗ, ಗಂಗಾಮತ ಎಸ್ ಟಿ ಸೇರ್ಪಡೆಯ ಪ್ರಸ್ತಾವನೆಯಲ್ಲಿ ತಳವಾರ ಪದವೇ ಇಲ್ಲ. ಅಂಬಿಗರ ಚೌಡಯ್ಯ ನಿಗಮದಲ್ಲೂ ತಳವಾರ ಇಲ್ಲ. ಇಷ್ಟೆಲ್ಲ ಮನವರಿಕೆ ಆದ ನಂತರವೇ ರಾಜ್ಯ ಸರ್ಕಾರ ಕೂಡ ತಳವಾರರಿಗೆ ಜಾತಿ ಪ್ರಮಾಣ ಪತ್ರ ನೀಡುವುದನ್ನು ಸರಳೀಕರಿಸಿದೆ.
ಹಳ್ಳಿ- ಹಳ್ಳಿಗಳಲ್ಲೂ ಟಿಎಸ್ ಎಸ್ ಸಂಚಲನ, ಜೈ ವಾಲ್ಮೀಕಿ -ಜೈ ತಳವಾರ ಘೋಷಣೆ ಅನುರಣನ !
ಇದೀಗ ಕೆಲವು ತಾಂತ್ರಿಕ ತೊಂದರೆಗಳ ಕಾರಣದಿಂದಲೋ, ಕುತಂತ್ರದಿಂದಲೋ ಕೆಲವು ಅನ್ಯ ಜಾತಿಯವರಿಗೆ ಎಸ್ ಟಿ ಪ್ರಮಾಣ ಸಿಕ್ಕಿರಬಹುದು. ಆ ಬಗ್ಗೆ ತನಿಖೆಗೆ ಅಭ್ಯಂತರವಿಲ್ಲ. ಆ ಬಗ್ಗೆ ಸ್ಥಾನಿಕ ಚೌಕಾಸಿ ನಡೆಯಲಿ.ಆದರೆ ಅಂಥ ಕೆಲವೇ ಕೆಲವು ಖೊಟ್ಟಿ ಪ್ರಮಾಣಪತ್ರಗಳನ್ನು ಇಟ್ಟುಕೊಂಡು ಇಡೀ ಸಮುದಾಯಕ್ಕೆ ಅನ್ಯಾಯ ಆಗುವಂಥ ತೀರ್ಮಾನ ಕೈಗೊಳ್ಳಬಾರದು. ಯಾವುದಕ್ಕೂ ಸಮುದಾಯದೊಂದಿಗೆ ಚರ್ಚಿಸಿಯೇ ಮುಂದಿನ ನಿರ್ಧಾರ ಕೈಗೊಳ್ಳಲು ಮನವಿ ಮಾಡಲಾಗುವುದೆಂದು ಸುಣಗಾರ ತಿಳಿಸಿದ್ದಾರೆ.