ಕೃಷ್ಣಾ ನದಿಪಾಲಾಗಿದ್ದ ಮತ್ತಿಬ್ಬರ ಶವ ಪತ್ತೆ..!
ವಿಜಯಪುರ: ಕೃಷ್ಣ ನದಿಯಲ್ಲಿ ತೆಪ್ಪ ಮುಗುಚಿ ಸಾವಿಗೀಡಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರ ಶವ ಪತ್ತೆಯಾಗಿದೆ. ಜುಲೈ 2ರ ಮಂಗಳವಾರ ಸಾಯಂಕಾಲ 4-30 ರ ಸುಮಾರಿಗೆ ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಏಳು ಜನರು ನೀರುಪಾಲಾಗಿದ್ದರು. ಆ ಪೈಕಿ ಮೂವರನ್ನು ರಕ್ಷಿಸಲಾಗಿದ್ದು, ಮೂವರು ಶವವಾಗಿ ಪತ್ತೆಯಾಗಿದ್ದರು. ಇದೀಗ ಗುರುವಾರ ಬೆಳಗ್ಗೆ ಮತ್ತಿಬ್ಬರ ಶವ ಹೊರತೆಗೆಯಲಾಗಿದೆ. ಪುಂಡಲಿಕ ಯಂಕಂಚಿ, ತಯ್ಯಬ್ ಚೌಧರಿ, ದಶರಥ ಗೌಡರ್ ಶವಗಳನ್ನು ಈಗಾಗಲೇ ತೆಗೆಯಲಾಗಿತ್ತು. ಇದೀಗ ಉಳಿದ ಇಬ್ಬರಾದ ರಫೀಕ್ ಬಾಂಬೆ ಹಾಗೂ ಮೆಹಬೂಬ್ ವಾಲಿಕಾರ್ ಶವ ಕೂಡ ಹೊರತೆಗೆಯಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಕಾರ್ಯಾಚರಣೆಗೆ ಮುಂದಾಗಿರುವ ಅಗ್ನಿಶಾಮಕ ದಳ ಸಿಬ್ಬಂದಿ 30 ಜನ ಸಿಬ್ಬಂದಿಗಳು ಹಾಗೂ ಐದು ಬೋಟ್ ಗಳ ಸಹಾಯದಿಂದ ಶವ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.