ರಾಜ್ಯ

ಗೌರಿ ಲಂಕೇಶ ಹತ್ಯೆ ಪ್ರಕರಣ, ಆರೋಪಿಗಳಿಬ್ಬರಿಗೆ ಜಾಮೀನಿನ ಮೇಲೆ ಬಿಡುಗಡೆ, ಅದ್ದೂರಿ ಸ್ವಾಗತ-ಸನ್ಮಾನ

ಸರಕಾರ ನ್ಯೂಸ್ ವಿಜಯಪುರ

ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ಸ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡ ಹಿನ್ನೆಲೆ ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.

ಆರೋಪಿಗಳಾದ ರತ್ನಾಪುರ ಗ್ರಾಮದ ಮನೋಹರ ಯಡವೆ ಹಾಗೂ ಸಿಂದಗಿಯ ಪರಶುರಾಮ ವಾಗ್ಮೋಡೆ ಇವರನ್ನು ಸನ್ಮಾನಿಸಲಾಯಿತು.

ಜಾಮೀನಿನ ಮೇಲೆ ಹೊರಬರುತ್ತಿದ್ದಂತೆ ಭಾರತ್ ಮಾತಾ ಕೀ ಜೈ, ಸನಾತನ ಧರ್ಮಕ್ಕೆ ಜೈ ಎಂಬ ಘೋಷಣೆ ಮೊಳಗಿಸಲಾಯಿತು. ನಗರದ ಕಾಳಿಕಾ ದೇವಸ್ಥಾನದಲ್ಲಿ ಈ ಇಬ್ಬರೂ ಆರೋಪಿಗಳು ನಿರ್ದೋಷಿಯಾಗಲಿ ಎಂದು ಅಭಿಷೇಕ ನೆರವೇರಿಸಲಾಯಿತು.

ಕಳೆದ ಆರು ವರ್ಷಗಳಿಂದ ಜೈಲಿನಲ್ಲಿದ್ದ ಈ ಇಬ್ಬರು ಸಹ ನಿರಪರಾಧಿಗಳಾಗಿದ್ದಾರೆ. ಸುಳ್ಳು ಪ್ರಕರಣ ದಾಖಲಿಸಿದ ಪರಿಣಾಮ ಅನವಶ್ಯಕವಾಗಿ ಜೈಲುವಾಸ ಅನುಭವಿಸಬೇಕಾಯಿತು. ಇದೀಗ ನ್ಯಾಯಾಲಯ ಜಾಮೀನು ನೀಡಿದ್ದರಿಂದ ಸನ್ಮಾನಿಸಿ ಸ್ವಾಗತ ಕೋರಲಾಗಿದೆ ಎಂದು ಮುಖಂಡ ಉಮೇಶ ವಂದಾಲ ತಿಳಿಸಿದರು.
ಕಾಳಿಕಾ ಮಂದಿರದಲ್ಲಿ ಪೂಜೆ ಸಲ್ಲಿಸಿದ ಬಳಿಕ ಶಿವಾಜಿ ಮೂರ್ತಿಗೆ ಹೂಮಾಲೆ ಹಾಕಿ ನಮಿಸಲಾಯಿತು. ಅಲ್ಲಿಂದ ಆರೋಪಿಗಳು ತವರಿಗೆ ಮರಳಿದರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಮುಖಂಡ ನೀಲಕಂಠ ಕಂದಗಲ್ಲ ಮತ್ತಿತರರಿದ್ದರು.

error: Content is protected !!