ತಡವಲಗಾದಲ್ಲಿ ಮಕ್ಕಳ ಅಸ್ವಸ್ಥ ಪ್ರಕರಣ, ಜಿಪಂ ಸಿಇಒ ರಾಹುಲ್ ಶಿಂಧೆ ಭೇಟಿ, ಅಲ್ಲಿನ ಅಧಿಕಾರಿಗಳಿಗೆ ಮಾಡಿದ್ದೇನು?
ಸರಕಾರ್ ನ್ಯೂಸ್ ವಿಜಯಪುರ
ವಿಷಯುಕ್ತ ಆಹಾರ ಸೇವಿಸಿ ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ವಿಚಾರಿಸುವ ಮೂಲಕ ಜಿಪಂ ಸಿಇಒ ವೃತ್ತಿ ಜವಾಬ್ದಾರಿಯ ಜೊತೆಗೆ ಕಾಳಜಿ ಮೆರೆದಿದ್ದಾರೆ.
ಬುಧವಾರ ಇಂಡಿ ತಾಲೂಕಿನ ತಡವಲಗಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು ಮಕ್ಕಳ ಆರೋಗ್ಯ ವಿಚಾರಿಸಿದರಲ್ಲದೇ ಘಟನೆಗೆ ಕಾರಣ ತಿಳಿದು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ ಇಂಡಿ ತಾಲೂಕಿನ ತಡವಲಗಾ ಗ್ರಾಮದ ಕಸ್ತೂರ ಬಾ ಗಾಂಧಿ ಬಾಲಕಿಯರ ವಸತಿ ವಿದ್ಯಾಲಯದ ಒಟ್ಟು 42 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿನಿಯರು ಆಹಾರ ಸೇವನೆಯಿಂದ ಅಸ್ವಸ್ಥರಾಗಿ ಚಿಕಿತ್ಸೆಗಾಗಿ ಜೂನ್ 07ರಂದು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಸಿಇಓ ಅವರು ಸಂಬಂಧಿಸಿದ ಅಧಿಕಾರಿಗಳಿಂದ ಪ್ರಾಥಮಿಕ ಮಾಹಿತಿ ಪಡೆದು ಸರಿಯಾಗಿ ಚಿಕಿತ್ಸೆ ಕೊಡಿಸಲು ಸಂಬಂಧಿಸಿದ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದರು.
ಜೂನ್ 08 ರಂದು ಖುದ್ದು ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳನ್ನು ಮಾತನಾಡಿಸಿ ಅವರ ಆರೋಗ್ಯ ವಿಚಾರಿಸಿದರು.
ಬಳಿಕ ಕಸ್ತೂರ ಬಾ ಗಾಂಧಿ ಬಾಲಕಿಯರ ವಸತಿ ವಿದ್ಯಾಲಯಕ್ಕು ಕೂಡ ಭೇಟಿ ನೀಡಿ, ಅಡುಗೆ ಕೋಣೆ ಮತ್ತು ಶಾಲಾ ಕೊಠಡಿಗಳನ್ನು ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಸಿಇಓ ಅವರು, ಆಹಾರ ಸೇವನೆಯಿಂದ ಮಕ್ಕಳು ಅಸ್ವಸ್ಥರಾಗಲು ಕಾರಣ ತಿಳಿಯಲು ತನಿಖೆ ನಡೆಸಿ ವರದಿ ನೀಡಲು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ವಿಜಯಪುರ, ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ, ಜಿಲ್ಲಾ ಅಂಕಿತ ಅಧಿಕಾರಿಗಳು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ವಿಜಯಪುರ, ತಾಲೂಕು ಆರೋಗ್ಯಾಧಿಕಾರಿಗಳು ಇಂಡಿ ಹಾಗೂ ತಡವಲಗಾ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ತಂಡವನ್ನು ರಚಿಸಿ ಸಮಗ್ರವಾದ ತನಿಖೆ ನಡೆಸಿ ಒಂದು ವಾರದೊಳಗಾಗಿ ವಿವರವಾದ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಂಡಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುನೀಲ್ ಮದ್ದಿನ, ಇಂಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಸಂತ ರಾಠೋಡ, ಇಂಡಿ ತಾಲೂಕಿನ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ಅರ್ಚನಾ ಕುಲಕರ್ಣಿ, ತಡವಲಗಾ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಸಿ.ಐ. ರಾಠೋಡ, ತಡವಲಗಾ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಹೇಶ ರಾಠೋಡ ಹಾಗೂ ಇತರರು ಹಾಜರಿದ್ದರು.