ನಮ್ಮ ವಿಜಯಪುರ

ಫೇಸ್‌ಬುಕ್‌ ಗೆಳತಿ ಕೊನೆಗೂ ಅರೆಸ್ಟ್‌, ಹಾಸನದ ಮಂಜುಳಾ ಈಗ ಪೊಲೀಸ್‌ರ ಅತಿಥಿ, ವಂಚನೆಯ ಹಣದ ಹಿನ್ನೆಲೆ ಕೇಳಿದರೆ ಶಾಕ್‌ ಖಂಡಿತ !

ಸರಕಾರ್‌ ನ್ಯೂಸ್‌ ವಿಜಯಪುರ

ಕಳೆದೆ ಕೆಲವು ದಿನಗಳ ಹಿಂದೆ ರಾಜ್ಯಾದ್ಯಂತ ಸದ್ದು ಮಾಡಿದ್ದ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ  ನಿವಾಸಿ ಪರಮೇಶ್ವರ ನಾನಾಗೌಡ ಹಿಪ್ಪರಗಿಗಾದ ವಂಚನೆಯ ಪ್ರಕರಣವನ್ನು ಭೇದಿಸಿರುವ ಪೊಲೀಸರು ವಂಚಕಿ ಮಂಜುಳಾನ್ನು ಬಂಧಿಸಿ ಹಣ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಮೂಲತಃ ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದ ದಾಸರಹಳ್ಳಿ ಗ್ರಾಮದ ಮಹಿಳೆ ಮಂಜುಳಾ ಕೆ.ಆರ್. ಫೇಸ್‌ಬುಕ್‌ ಮೂಲಕ ಪರಮೇಶ್ವರನನ್ನು ಸ್ನೇಹಿತನನ್ನಾಗಿ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿ ಬರೋಬ್ಬರಿ 39 ಲಕ್ಷಕ್ಕೂ ಅಧಿಕ ಹಣ ಪಡೆದಿದ್ದಳು. ಮೋಸ ಹೋದ ಪರಮೇಶ್ವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಇದೀಗ ಪ್ರಕರಣ ಭೇದಿಸಿದ ಪೊಲೀಸರು ಮಂಜುಳಾನನ್ನು ಬಂಧಿಸಿ ಆಕೆಯಿಂದ ಒಂದು ಕಾರ್‌, ಮೊಬೈಲ್‌, ನಗದು ಸೇರಿದಂತೆ ಒಟ್ಟು 6,64,000 ರೂ. ಮೌಲ್ಯದ ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.

ವಂಚನೆ ಹಣದಲ್ಲಿ ಐಷಾರಾಮಿ ಬದುಕು:

ಪರಮೇಶ್ವರನಿಗೆ ವಂಚಿಸಿದ ಹಣದಲ್ಲಿಯೇ ಮಂಜುಳಾ 100 ಗ್ರಾಂ ಚಿನ್ನಾಭರಣ, ಒಂದು ಸೆಕೆಂಡ್‌ ಹ್ಯಾಂಡ್‌ ಹುಂಡೈ ಕಂಪನಿಯ ಸ್ಯಾಂಟ್ರೋ ಕಾರ್‌ ಹಾಗೂ ಬಜಾಜ್‌ ಸಿಟಿ ಹಂಡ್ರೆಡ್‌ ಮೋಟರ್‌ ಸೈಕಲ್‌ ಖರೀದಿಸಿದ್ದಾರೆ. ಅಲ್ಲದೇ ದಾಸರಹಳ್ಳಿಯಲ್ಲಿ ಐಶಾರಾಮಿ ಮನೆ ನಿರ್ಮಿಸಿದ್ದಲ್ಲದೇ ತನ್ನ ಪತಿಯ ಜೊತೆಗೆ ಕೂಡಿ ಸ್ವಾಮಿ ಫೈನಾನ್ಸ್‌ ಹೆಸರಿನ ಫೈನಾನ್ಸ್‌ ಕಂಪನಿ ತೆರೆದು ಸಾರ್ವಜನಿಕರಿಗೆ ಸಾಲ ನೀಡಿದ್ದಾರೆ. ಇನ್ನುಳಿದ ಹಣ ಬಂಗಾರದ ಒಡವೆಗೆ ಮಾಡಿಸಿಕೊಳ್ಳಲು ಖರ್ಚು ಮಾಡಿದ್ದಾರೆ. ವಿಚಾರಣೆ ವೇಳೆ ಮಂಜುಳಾ ಹಾಗೂ ಆಕೆ ಗಂಡ ಸ್ವಾಮಿ ತಪ್ಪೊಪ್ಪಿಕೊಂಡಿದ್ದು, ಅವರ ಫೆಡರಲ್‌ ಬ್ಯಾಂಕ್‌ ಖಾತೆಯನ್ನು ಮುಟ್ಟುಗೋಲು ಹಾಕಿದ್ದು, ಅದರಲ್ಲಿ 6 ಲಕ್ಷ ಹಣ ವಶಕ್ಕೆ ಪಡೆದಿದ್ದಾಗಿ ಎಸ್‌ಪಿ ಆನಂದಕುಮಾರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತನಿಖಾ ತಂಡದ ಕಾರ್ಯಕ್ಕೆ ಶ್ಲಾಘನೆ:

ಪರಮೇಶ್ವರ ನಗರದ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸ್‌ ಅಧೀಕ್ಷಕ ಎಸ್‌ಪಿ ಎಚ್‌.ಡಿ. ಆನಂದಕುಮಾರ ವಿಶೇಷ ತನಿಖಾ ತಂಡ ರಚಿಸಿದ್ದರು. ಎಎಸ್‌ಪಿ ಶಂಕರ ಮಾರಿಹಾಳ ಮಾರ್ಗದರ್ಶನದಲ್ಲಿ ಸಿಪಿಐ ರಮೇಶ ಅವಜಿ ನೇತೃತ್ವ ವಿಶೇಷ ತಂಡ ರಚಿಸಿದ್ದರು. ಪ್ರಕರಣ ಬೆನ್ನಟ್ಟಿದ್ದ ರಮೇಶ ಅವಜಿ ಟೆಕ್ನಿಕಲ್‌ ಎವಿಡೆನ್ಸ್ ಗಳಾದ ಮೊಬೈಲ್‌ ಸಿಡಿಆರ್‌ ಲೋಕೇಶನ್‌ ಹಾಗೂ ಮೊಬೈಲ್‌ ಸಿಎಂ ಸಬ್‌ಕ್ರೈಬರ್‌ ಹಾಗೂ ಬ್ಯಾಂಕ್‌ ಕೆವೈಸಿ ಮಾಹಿತಿ ಕಲೆ ಹಾಕಿ ಮಂಜುಳಾ ಪತ್ತೆಗೆ ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣ ತಾಲೂಕಿನ ದಾಸರಳ್ಳಿಗೆ ದೌಡಾಯಿಸಿತ್ತು. ಅಲ್ಲಿ ಮಂಜುಳಾ ತನ್ನ ಗಂಡನೊಂದಿಗೆ ವಾಸವಾಗಿದ್ದು ಈ ಕೃತ್ಯದಲ್ಲಿ ಒಟ್ಟಿಗೆ ಭಾಗಿಯಾಗಿರುವುದು ಕಂಡು ಬಂದಿದೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಮಾಡಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!