ತಳವಾರ-ಪರಿವಾರ ಸಮುದಾಯಕ್ಕೆ ಎಸ್‌ಟಿ ನೀಡಿದ್ದೇವೆ, ಅರುಣ ಸಿಂಗ್ ಹೇಳಿದ್ದೇನು?
ಸರಕಾರ್ ನ್ಯೂಸ್ ಇಂಡಿ/ಸಿಂದಗಿ
ತಳವಾರ ಮತ್ತುಪರಿವಾರ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆಗೊಳಿಸುವ ಮೂಲಕ ಬಿಜೆಪಿ ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಹೇಳಿದರು.
ಇಂಡಿ ಹಾಗೂ ಸಿಂದಗಿ ವಿಧಾನ ಸಭೆ ಕ್ಷೇತ್ರದಲ್ಲಿ ಮಂಗಳವಾರ ನಡೆದ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತಳವಾರ ಮತ್ತು ಪರಿವಾರ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆಗೊಳಿಸಿ ಅಧಿಸೂಚನೆ ಪ್ರಕಟಿಸಿತ್ತು. ಇದೀಗ ರಾಜ್ಯ ಸರ್ಕಾರ ಜಾರಿಗೆ ತಂದಿದೆ ಎಂದರು.
ಸಿಂದಗಿ ವಿಧಾನ ಸಭೆ ಉಪ ಚುನಾವಣೆ ವೇಳೆ ಕೊಟ್ಟ ಮಾತಿನಂತೆ ತಳವಾರ -ಪರಿವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಅಲ್ಲದೇ, ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ. 15 ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3ರಿಂದ 7ಕ್ಕೆ ಹೆಚ್ಚಿಸಲಾಗಿದೆ. ಆ ಮೂಲಕ ಸಾಮಾಜಿಕ ನ್ಯಾಯ ಎಂದರೇನು ಎಂಬುದನ್ನು ತಿಳಿಸಿಕೊಟ್ಟಿದೆ ಎಂದರು.
ಸಿಂದಗಿ ಶಾಸಕ ರಮೇಶ ಮಾತನಾಡಿ, ಸಿಂದಗಿ ಉಪ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ತಳವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಶೀಘ್ರದಲ್ಲಿಯೇ ಸುಮಾರು 40ಸಾವಿರ ಜನರನ್ನು ಸೇರಿಸಿ ಸಮಾವೇಶ ನಡೆಸಲಾಗುವುದು ಎಂದರು.
ಸಂಸದ ರಮೇಶ ಜಿಗಜಿಣಗಿ, ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ದಯಾಸಾಗರ ಪಾಟೀಲ, ಮಲ್ಲಿಕಾರ್ಜುನ ಕಿವುಡೆ, ಸಿದ್ದಲಿಂಗ ಹಂಜಗಿ, ಎಸ್.ಕೆ. ಬೆಳ್ಳುಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮತ್ತಿತರರಿದ್ದರು.