ನಮ್ಮ ವಿಜಯಪುರ

ಮುಳ್ಳು ಕಂಟಿಯಲ್ಲಿ ಸಿಕ್ಕ ಮಹಿಳೆ ಶವ, ಡಾಬಾ ಹಿಂದೆ ನಡೆದ ಘಟನೆ, ಏನಾಗಿತ್ತು? ಯಾರು ಆ ಲೇಡಿ?

ಸರಕಾರ್‌ ನ್ಯೂಸ್‌ ವಿಜಯಪುರ

ಇಲ್ಲಿನ ಕೊಲ್ಹಾರ್‌ ರಸ್ತೆಯಲ್ಲಿರುವ ದಿಲ್ಲಿ ದರಬಾರ್‌ ಡಾಬಾದ ಹಿಂದೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಪತ್ತೆಯಾಗಿದ್ದ ಮಹಿಳೆಯ ಶವ ಕೊನೆಗೂ ಗುರುತು ಸಿಕ್ಕಿದ್ದು, ಮೃತ ಮಹಿಳೆಯನ್ನುದೇವರಹಿಪ್ಪರಗಿಯ ಶ್ರೀದೇವಿ ರಮೇಶ ತಳಕೇರಿ (34) ಎಂದು ಗುರುತಿಸಲಾಗಿದೆ.

ನ. 10ರಂದು ಶ್ರೀದೇವಿಯ ಶವ ಸಿಕ್ಕಿತ್ತು. ಪೊಲೀಸರು ಅದನ್ನು ಸರ್ಕಾರ ಜಿಲ್ಲಾಸ್ಪತ್ರೆಯಲ್ಲಿರಿಸಿದ್ದರು. ಇದೀಗ ಶ್ರೀದೇವಿಯ ತಾಯಿ ನೀಲವ್ವ ಶವ ಪತ್ತೆ ಹಚ್ಚಿದ್ದು, ಜಲನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಮಾತ್ರವಲ್ಲ ಶ್ರೀದೇವಿ ಕೊಲೆಯಾಗಿದ್ದು, ಯೋಗ್ಯ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣದ ವಿವರ:

ಶ್ರೀದೇವಿಯನ್ನು ದೇವರಹಿಪ್ಪರಗಿಯ ರಮೇಶ ಮನೋಹರ ತಳಕೇರಿ ಎಂಬುವರೊಂದಿಗೆ 17-18 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ರಮೇಶ ಗೌಂಡಿ ಕೆಲಸ ಮಾಡಿಕೊಂಡಿದ್ದು, ಇವರಿಗೆ ಸೌಂದರ್ಯ ಹಾಗೂ ಸಾನಿಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ರಮೇಶ ವಿನಾಕಾಣ ಶ್ರೀದೇವಿಯೊಂದಿಗೆ ಜಗಳ ಕಾಯುತ್ತಿದ್ದನು. ಕಳೆದ ಎರಡ್ಮೂರು ವರ್ಷಗಳಿಂದ ಶ್ರೀದೇವಿಯೊಂದಿಗೆ ಮಾತನಾಡದೆ ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದನು. ಇತ್ತೀಚೆಗೆ ದೇವರಹಿಪ್ಪರಗಿಯ ರಾವುತರಾಯನ ಜಾತ್ರೆಗೆ ತೆರಳಿದ್ದ ಸಂದರ್ಭ ರಮೇಶನ ಅಕ್ಕ ಲಕ್ಷ್ಮಿ ಊರ್ಫ್‌ ಲಕ್ಕವ್ವ ಸಂಧಿಮನಿ ಹಾಗೂ ಅವಳ ಗಂಡ ಗಂಗಾರಾಮ ಶ್ರೀದೇವಿಯನ್ನು ಕರೆದುಕೊಂಡು ಸವನಳ್ಳಿಗೆ ತೆರಳಿದ್ದರು. ಬಳಿಕ ಶ್ರೀದೇವಿ ಸವನಳ್ಳಿಯಿಂದ ಪ್ರತಿ ದಿನ ವಿಜಯಪುರಕ್ಕೆ ಬಂದು ಡಾಬಾದಲ್ಲಿ ಮುಸುರಿ ತೊಳೆಯುವ ಕೆಲಸದಲ್ಲಿ ತೊಡಗಿದ್ದಾಗಿ ತವರು ಮನೆಯವರಿಗೆ ತಿಳಿಸಿದ್ದಳು. ಅದಾದ ಬಳಿಕ ಅಂದರೆ ಕಳೆದ 8-10 ದಿನಗಳ ಹಿಂದೆ ವಿಜಯಪುರದ ಕೊಲ್ಹಾರ ಓವರ್‌ ಬ್ರಿಡ್ಜ್‌ ಹತ್ತಿರ ಇರುವ ದಿಲ್ಲಿ ದರಬಾರ್‌ ಹಿಂದಿನ ಏರಿಯಾದಲ್ಲಿ ಪತ್ರಾಸ್‌ ಶೆಡ್‌ನಲ್ಲಿ ಲಕ್ಷ್ಮಿ ಊರ್ಫ್‌ ಲಕ್ಕವ್ವ ಹಾಗೂ ಇವರ ಮಗನಾದ ಆಕಾಶ ಇವರನ್ನು ಕರೆದುಕೊಂಡು ಇರುವುದಾಗಿ ತವರು ಮನೆಗೆ ತಿಳಿಸಿದ್ದಳು. ನ. 11ರಂದು ಬೆಳಗ್ಗೆ 11ರ ಸುಮಾರಿಗೆ ಶ್ರೀದೇವಿ ಆರೋಗ್ಯ ಸರಿಯಿಲ್ಲ ಎಂದು ಕರೆ ಬಂದಿತು. ಬಳಿಕ ವಿಚಾರಿಸಲಾಗಿ ಮುಳ್ಳು ಕಂಟಿಯಲ್ಲಿ ಶವ ಬಿದ್ದಿರುವ ಅಂಶ ತಿಳಿಯಿತು. ಅಲ್ಲದೇ ಶವವನ್ನು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿತ್ತು. ಅಲ್ಲಿಗೆ ತೆರಳಿ ನೋಡಲಾಗಿ ಶ್ರೀದೇವಿಯೇ ಎಂಬುದು ಖಚಿತವಾಗಿದ್ದು, ಎಡ ಹುಬ್ಬಿನ ಮೇಲೆ,ಹಣೆ ಮೇಲೆ ಗಾಯವಾಗಿದ್ದು, ಕುತ್ತಿಗೆ ಕಂದು ಗಟ್ಟಿದಂತಾಗಿತ್ತು.

ಏನಾಗಿತ್ತು ಶ್ರೀದೇವಿಗೆ?

ಲಕ್ಷ್ಮಿ ಊರ್ಫ್‌ ಲಕ್ಕವ್ವನ ಮಗ ಆಕಾಶನನ್ನು ವಿಚಾರಿಸಲಾಗಿ ಶ್ರೀದೇವಿ ನ. 9ರಂದು ರಾತ್ರಿ 8ರ ಸುಮಾರಿಗೆ ತನ್ನ ಗೆಳತಿ ಬಂದಾಳ ಹೋಗಿ ಬರುವುದಾಗಿ ಹೇಳಿ ಬುತ್ತಿಕಟ್ಟಿಕೊಂಡು ಮನೆಯಿಂದ ಹೋಗಿದ್ದಳು. ರಾತ್ರಿಯಾದರೂ ಬರಲಿಲ್ಲ. ಮರುದಿನ ಬೆಳಗ್ಗೆ ಆಕಾಶ ಕಾಲೇಜ್‌ಗೆ ಹೋಗಿ ಮರಳಿ ಮನೆಗೆ ಬರುವವರೆಗೂ ಶ್ರೀದೇವಿ ಬಂದಿರಲಿಲ್ಲ. ಹೀಗಾಗಿ ಸವನಳ್ಳಿಗೆ ಹೋಗಿ ಮನೆಯವರಿಗೆ ವಿಷಯ ತಿಳಿಸಿದ್ದನು. ಅಲ್ಲಿಂದ ಮರಳಿ ವಿಜಯಪುರಕ್ಕೆ ಬಂದಾಗ ಜನ ಶವ ಸಿಕ್ಕ ಬಗ್ಗೆ ಮಾತನಾಡುವುದನ್ನು ಕೇಳಿದ ಓಣಿಯ ಜನ ಅದು ಶ್ರೀದೇವಿಯದ್ದೇ ಎಂದು ಹೇಳಿದಾಗಲೇ ತಮಗೂ ಗೊತ್ತಾಗಿದ್ದು ಎಂದು ಆಕಾಶ ಶ್ರೀದೇವಿಯ ತಾಯಿ ನೀಲವ್ವಳಿಗೆ ತಿಳಿಸಿದ್ದನು.

ಪ್ರಕರಣ ಅವಲೋಕಿಸಲಾಗಿ ಯಾರೋ ಕೊಲೆ ಮಾಡಿ ಸಾಕ್ಷ್ಯ ನಾಶ ಪಡಿಸುವ ಉದ್ದೇಶದಿಂದ ಶವವನ್ನು ಮುಳ್ಳುಕಂಟಿಯಲ್ಲಿ ಬೀಸಾಕಿದ್ದು ಈ ಬಗ್ಗೆ ಯೋಗ್ಯ ಕ್ರಮ ಜರುಗಿಸಬೇಕೆಂದು ಶ್ರೀದೇವಿಯ ತಾಯಿ ನೀಲವ್ವ ದೂರಿನಲ್ಲಿ ತಿಳಿಸಿದ್ದಾರೆ.

 

error: Content is protected !!