ನಮ್ಮ ವಿಜಯಪುರ

ವಿಜಯಪುರಕ್ಕೆ ಬೇಕು ಪ್ರತ್ಯೇಕ ವಿಶ್ವ ವಿದ್ಯಾಲಯ, ಪದವಿ ಕಾಲೇಜ್ ಗಳ ಒಕ್ಕೂಟದಿಂದ ಬೃಹತ್ ಹೋರಾಟ

ಸರಕಾರ್ ನ್ಯೂಸ್ ವಿಜಯಪುರ

ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲಿ ಪ್ರತ್ಯೇಕ ವಿಶ್ವ ವಿದ್ಯಾಲಯ ಸ್ಥಾಪನೆಗೆ ಆಗ್ರಹಿಸಿ ಜಿಲ್ಲಾ ಪದವಿ ಮಹಾವಿದ್ಯಾಲಯಗಳ ಒಕ್ಕೂಟದ ನೇತೃತ್ವ ನೂರಾರು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಡಳಿತ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆದು ಬಳಿಕ ಸಮಾವೇಶವಾಗಿ ಮಾರ್ಪಟ್ಟಿತು‌.

ಒಕ್ಕೂಟದ ಸಹ ಕಾರ್ಯದರ್ಶಿ ಡಾ.ಬಂದೇನವಾಜ ಕೋರಬು ಮಾತನಾಡಿ, 2023-24 ನೇ ಸಾಲಿನಿಂದ ವಿಜಯಪುರ ನಗರದಲ್ಲಿ ನೂತನ ವಿಶ್ವ ವಿದ್ಯಾಲಯ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.

ಸರಕಾರ 2023-24 ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ಬಾಗಲಕೋಟೆ ಜಿಲ್ಲೆಯಲ್ಲಿ ನೂತನ ವಿಶ್ವ ವಿದ್ಯಾಲಯ ಸ್ಥಾಪಿಸಲು ನಿರ್ಣಯ ತೆಗೆದುಕೊಂಡಿದೆ. ಈ ವಿಶ್ವ ವಿದ್ಯಾಲಯದಡಿ ವಿಜಯಪುರ ಜಿಲ್ಲೆಯ ಎಲ್ಲ ಪದವಿ ಕಾಲೇಜುಗಳನ್ನು ಸಂಯೋಜಿಸಬೇಕು. ಇಲ್ಲವೇ ವಿಜಯಪುರ ಜಿಲ್ಲೆಗೆ ಪ್ರತ್ಯೇಕ ವಿಶ್ವ ವಿದ್ಯಾಲಯ ಒದಗಿಸಬೇಕೆಂದು ಒತ್ತಾಯಿಸಿದರು.

ಪ್ರಸ್ತುತ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯವು ಬೆಳಗಾವಿ ನಗರದ ಹೊರವಲಯದಲ್ಲಿದ್ದು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ವಾಹನ ಸೌಲಭ್ಯದ ಕೊರತೆಯಾಗಿದೆ. ವಿದ್ಯಾರ್ಥಿಗಳಿಗೆ ಮೈಗ್ರೇಶನ್ ಪ್ರಮಾಣ ಪತ್ರ, ಮೂಲ ಅಂಕಪಟ್ಟಿಗಳು, ವರ್ಗಾಣೆ ಪ್ರಮಾಣ ಪತ್ರ, ಘಟಿಕೋತ್ಸವ ಪ್ರಮಾಣ ಪತ್ರ ಇತರೆ ದಾಖಲಾತಿಗಳು ಬೇಕಾದಲ್ಲಿ ಬೆಳಗಾವಿಗೆ ಹೋಗಬೇಕಿದ್ದು, ಇದರಿಂದ ಸಮಯ ಹಾಗೂ ಪ್ರಯಾಣ ವೆಚ್ಚ ಹೆಚ್ಚಾಗಲಿದೆ. ಮಹಾ ವಿದ್ಯಾಲಯದವರು ದಾಖಲೆಗಳನ್ನು ಅಲ್ಲಿಸಲು ಖುದ್ದಾಗಿ ಬೆಳಗಾವಿಗೆ ಹೋಗಿ ಬರುವ ವೆಚ್ಚ ಸಹ ಹೆಚ್ಚಾಗಲಿದೆ. ಸದ್ಯ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಕಾಲೇಜುಗಳಿಗಿಂತ 130 ಕ್ಕೂ ಹೆಚ್ಚಿನ ಪದವಿ ಕಾಲೇಜ್ ಗಳು ವಿಜಯಪುರ ಜಿಲ್ಲೆಯಲ್ಲಿವೆ. ಹೀಗಾಗಿ ವಿಜಯಪುರ‌ ಜಿಲ್ಲೆಯ ಎಲ್ಲ ಪದವಿ ಕಾಲೇಜ್ ಗಳನ್ನು ಬಾಗಲಕೋಟೆಯ ನೂತನ ವಿಶ್ವ ವಿದ್ಯಾಲಯಕ್ಕೆ ಸಂಯೋಜನೆಗೊಳಿಸಬೇಕು. ಇಲ್ಲವಾದಲ್ಲಿ ವಿಜಯಪುರ ಕ್ಕೆ ಪ್ರತ್ಯೇಕ ವಿವಿ ಸ್ಥಾಪಿಸಬೇಕೆಂದು ಆಗ್ರಹಿಸಿದರು.

ಜಿಲ್ಲೆಯ ಇಂಡಿ, ಸಿಂದಗಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ಬಬಲೇಶ್ವರ ಸೇರಿದಂತೆ ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ತಮ್ಮ ಸಮಸ್ಯೆ ಹೇಳಿಕೊಂಡರು.

ಒಕ್ಕೂಟದ ಅಧ್ಯಕ್ಷ ಎಸ್.ಎಸ್. ರಾಜಮಾನ್ಯ, ಕಾರ್ಯದರ್ಶಿ ಡಾ.ಎಸ್.ಐ. ಮೇತ್ರಿ, ಸಹ ಕಾರ್ಯದರ್ಶಿ ಪ್ರೊ.ಎಸ್.ಆರ್. ಡಬ್ಬಿ, ಕಾರ್ಯಾಧ್ಯಕ್ಷ ಡಾ.ವಿ.ಬಿ. ಗ್ರಾಮ ಪುರೋಹಿತ,
ಖಜಾಂಚಿ ಪ್ರೊ.ಬಿ.ಎಸ್. ಬಾಪಗೊಂಡ, ಸಂಯೋಜನಾಧಿಕಾರಿ ಡಾ.ಅಶೋಕ ಜಾಧವ, ಪ್ರೊ.ಬಿ.ಎಸ್. ಬಗಲಿ, ಡಾ.ಬಿ.ಜಿ. ಪಾಟೀಲ, ಡಾ.ಎ.ಸಿ. ನಡುವಿನಮನಿ, ಪ್ರೊ.ಡಿ.ಬಿ. ಮುಗಡ್ಲಿಮಠ, ಪ್ರೊ.ಬಿ.ಎಚ್. ಅವಟಿ ಮತ್ತಿತರರಿದ್ದರು.

error: Content is protected !!