ಪ್ರಧಾನಿ ಮೋದಿ ಭೇಟಿಗಾಗಿ 2500 ಕಿಮೀ ಪಾದಯಾತ್ರೆ, ಜಮಖಂಡಿ ಟು ದೆಹಲಿ ಕಾಲ್ನಡಿಗೆ
ಸರಕಾರ್ ನ್ಯೂಸ್ ವಿಜಯಪುರ
ಪ್ರಧಾನಿ ನರೇಂದ್ರ ಮೋದಿ ಭೇಟಿಗಾಗಿ ಅಭಿಮಾನಿಗಳಿಬ್ಬರು 2500 ಕಿಮೀ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಮೂಲತಃ ಜಮಖಂಡಿ ತಾಲೂಕಿನ ಶಿರಗುಪ್ಪಿ ಗ್ರಾಮದ ಸಂತೋಷ ಹಿರೇಮಠ ಹಾಗೂ ಬಸಪ್ಪ ಸಂತಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಮಂಗಳವಾರ ವಿಜಯಪುರಕ್ಕೆ ತಲುಪಿದರು. ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಬರಮಾಡಿಕೊಂಡು ಉಪಚರಿಸಿದರು. ಬಳಿಕ ಆತ್ಮೀಯವಾಗಿ ಬೀಳ್ಕೊಟ್ಟರು.
ವೃತ್ತಿಯಿಂದ ಚಾಲಕನಾಗಿರುವ ಸಂತೋಷ ಹಿರೇಮಠ ಹಾಗೂ ರೈತನಾಗಿರುವ ಬಸಪ್ಪ ಸಂತಿ ಈಗಾಗಲೇ ಮೋದಿ ಭೇಟಿಗಾಗಿ ಒಮ್ಮೆ ಪಾದಯಾತ್ರೆ ನಡೆಸಿದ್ದರು. ಆದರೆ, ಅವರ ಭೇಟಿ ಅಸಾಧ್ಯವಾದ ಹಿನ್ನೆಲೆ ಮೋದಿ ಅವರ ತಾಯಿಯವರನ್ನು ಭೇಟಿ ಮಾಡಿ ವಾಪಸ್ ಆಗಿದ್ದರು. ಇದೀಗ ಮತ್ತೊಮ್ಮೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಪ್ರತಿ ದಿನ 45-50 ಕಿಮೀ ಕ್ರಮಿಸುತ್ತಿರುವ ಇವರು ಮೊದಲು ಅಯೋಧ್ಯೆಗೆ ತೆರಳಿ ಪ್ರಭು ಶ್ರೀರಾಮನ ದರ್ಶನ ಪಡೆದು ಅಲ್ಲಿಂದ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಂಕಲ್ಪ ಮಾಡಿದ್ದಾರೆ.