ಸಿದ್ದೇಶ್ವರ ಜಾತ್ರೋತ್ಸವ ಸರಳ ಆಚರಣೆಗೆ ನಿರ್ಧಾರ, ಸಂಸ್ಥೆಯಿಂದ ಮಹತ್ವದ ಸುದ್ದಿಗೋಷ್ಠಿ
ಸರಕಾರ್ ನ್ಯೂಸ್ ವಿಜಯಪುರ
ಪರಮಪೂಜ್ಯ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆ ಈ ಬಾರಿ ಸಿದ್ದೇಶ್ವರ ಜಾತ್ರೆಯನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದು ಸಿದ್ದೇಶ್ವರ ಸಂಸ್ಥೆ ಚೇರಮನ್ ಬಸಯ್ಯ ಹಿರೇಮಠ ಹೇಳಿದರು.
ಮದ್ದು ಸುಡುವ ಕಾರ್ಯಕ್ರಮ, ಜಾನುವಾರು ಜಾತ್ರೆ, ಮಳಿಗೆಗಳ ಸ್ಥಾಪನೆ ನಿಷೇಧಿಸಲಾಗಿದೆ.
ಕೇವಲ ನಂದಿಕೋಲು ಮೆರವಣಿಗೆ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ಮಾತ್ರ ಆಚರಿಸಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಜ. 12 ರಂದು ಗೋಪೂಜೆಯೊಂದಿಗೆ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ. ಜ. 13 ರಂದು ಮಧ್ಯಾಹ್ನ 12.30 ಕ್ಕೆ ನಂದಿ ಧ್ವಜಗಳ ಪೂಜೆ ನೆರವೇರಲಿದೆ. ನಗರದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ನಡೆಯಲಿದೆ. ಜ. 14 ರಂದು ಭೋಗಿ ಇದ್ದು, ಅಂದು ನಂದಿ ಧ್ವಜ ಪೂಜೆ, ಸಿದ್ದೇಶ್ವರ ದೇವಸ್ಥಾನ ಮುಂಭಾಗದ ವೇದಿಕೆಗೆ ಸಿದ್ದೇಶ್ವರ ಸ್ವಾಮೀಜಿ ಹೆಸರು ಇರಿಸಲಿದ್ದು ಅಲ್ಲಿ ಯೋಗ ದಂಡ ಪೂಜೆ ನೆರವೇರಲಿದೆ.
ಜ. 15 ರಂದು ಮಧ್ಯಾಹ್ನ 12.30 ಕ್ಕೆ ನಂದಿ ಧ್ವಜ ಪೂಜೆ ಹಾಗೂ ಹೋಮಹವನ ಕಾರ್ಯಕ್ರಮ ನಡೆಯಲಿದೆ. ಬಳಿಕ ಎಳ್ಳು ಬೆಲ್ಲ ಕೊಡುವ ಕಾರ್ಯಕ್ರಮ, ನಂದಿ ಧ್ವಜ ಮೆರವಣಿಗೆ ನಡೆಯಲಿದೆ ಎಂದರು.
ಜ.16 ರಂದು ಯಥಾಪ್ರಕಾರ ಪೂಜೆ ಪುನಸ್ಕಾರ, ನಂದಿ ಧ್ವಜ ಮೆರವಣಿಗೆ ನಡೆಯಲಿದೆ. ಪ್ರತಿ ದಿನ ಸಂಜೆ 6.30 ರಿಂದ 12 ರವರೆಗೆ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮೊದಲ ದಿನ
ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ನುಡಿ ನಮನ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಬಳಿಕ ನಿರಂತರ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನ ಒಬ್ಬೊಬ್ಬರು ಪ್ರಸಾದ ವ್ಯವಸ್ಥೆ ಮಾಡಿದ್ದಾರೆ.
ಜ. 17ರಂದು ದೇವಸ್ಥಾನ ಆವರಣದಲ್ಲಿ ಭಾರ ಎತ್ತುವ ಕಾರ್ಯಕ್ರಮ ಇರಲಿದ್ದು, ಜ.18ರಂದು ಕುಸ್ತಿ ಪಂದ್ಯಾವಳಿಗಳನ್ನು ಸಂಕ್ಷಿಪ್ತ ವಾಗಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷರೂ ಆದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಸಿದ್ದೇಶ್ವರ ಶ್ರೀಗಳ ಅಗಲಿಕೆಯಿಂದಾಗಿ ಈ ಬಾರಿ ಸರಳವಾಗಿ ಜಾತ್ರೋತ್ಸವ ಆಯೋಜಿಸಲಾಗಿದೆ ಎಂದರು.
ಮುಖಂಡರಾದ ಸಿದ್ರಾಮಪ್ಪ ಉಪ್ಪಿನ, ಸಂಗು ಅಜ್ಜನ, ರಾಜು ಮಗಿಮಠ ಮತ್ತಿತರರಿದ್ದರು.