ನಮ್ಮ ವಿಜಯಪುರ

ಅಪರಾಧಿಗಳ ಹೆಡೆಮುರಿ ಕಟ್ಟಿದ ಖಾಕಿ ಪಡೆ, ಯಾವ ಪ್ರಕರಣ? ಎಷ್ಟು ಜನರ ಬಂಧನ?

ಸರಕಾರ್‌ ನ್ಯೂಸ್ ವಿಜಯಪುರ

ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಚುರುಕಿನ ಕಾರ್ಯಾಚರಣೆಗೆ ಇಳಿದಿದ್ದು, ವಿವಿಧ ಪ್ರಕರಣಗಳಲ್ಲಿ ಕಳ್ಳರನ್ನು ಹೆಡೆಮುರಿ ಕಟ್ಟಿ ತರುವಲ್ಲಿ ಖಾಕಿ ಪಡೆ ಸಫಲವಾಗಿದೆ.

ಮೂರು ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ ಅವರಿಂದ ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಚ್.ಡಿ. ಆನಂದಕುಮಾರ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.

ವಿಜಯಪುರ, ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಲ್ಲಿ ವಾಹನ ಹಾಗೂ ಮನೆ ಕಳ್ಳತನ ಮಾಡುತ್ತಿದ್ದ ಮಹಾರಾಷ್ಟ್ರದ ಬೀಡ್ ಗ್ರಾಮದ ಸಿಕಂದರ್ ಅಖ್ತರ್ ಸೈಯ್ಯದ್ (40), ಆಗಮೀರಖಾನ್ ಉರ್ಫ್ ಜಹಾಂಗೀರಖಾನ್ ಪಠಾಣ (40), ಅಬ್ದುಲ್‌ರಹೀಮ್ ಅಬ್ದುಲ್‌ಕರೀಮ್ ಶೇಖ್ (52) ಇವರನ್ನು ಬಂಧಿಸಲಾಗಿದೆ. ಇವರಿಂದ 1 ಬುಲೋರೋ, ಕ್ರೂಸರ್ ಸೇರಿದಂತೆ 3 ವಾಹನಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಅಲ್ಲದೇ, ವಿಜಯಪುರ ನಗರದಲ್ಲಿ ಇತ್ತೀಚೆಗೆ ನಡೆದ ಮೋಟರ್ ಸೈಕಲ್ ಕಳ್ಳತನ ಪ್ರಕರಣಗಳ ತಪಾಸಣೆ ಕುರಿತು ಎಎಸ್‌ಪಿ ಡಾ.ಶ್ರೀರಾಮ ಅರಸಿದ್ಧಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿತ್ತು. ಈ ತಂಡ ರಾಜ್ಯ ಹಾಗೂ ನೆರೆಯ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ, ಸೋಲಾಪೂರ ಹಾಗೂ ನೆರೆಯ ಜಿಲ್ಲೆಗಳಾದ ಬಾಗಲಕೋಟ, ಬೆಳಗಾವಿ ಕಡೆಗಳಲ್ಲಿ ಕಾರ್ಯಾಚರಿಸಿ ಆರೋಪಿಗಳನ್ನು ಬಂಧಿಸಿದೆ ಎಂದರು.

ಬಂಧಿತರು ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಮನೆ ಕಳ್ಳತನ, ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ 3 ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. 1 ಬುಲೋರೋ ಕೂಡ ಕದ್ದಿದ್ದಾರೆ. ಮಹಾರಾಷ್ಟ್ರದ ಜಾಲ್ನಾ ಷಹರ ಸದರ ಬಜಾರ್ ಠಾಣೆ ವ್ಯಾಪ್ತಿಯಲ್ಲಿ ಕ್ರೂಸರ್, ಪಾಕರ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಬುಲೆರೋ ವಾಹನ ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಎಸ್‌ಪಿ ಆನಂದಕುಮಾರ ತಿಳಿಸಿದರು.

ಪ್ರತ್ಯೇಕ ಪ್ರಕರಣ:
ಮತ್ತೊಂದು ಪ್ರಕರಣದಲ್ಲಿ ನಗರದ ವಿವಿಧ ಮನೆಗಳಲ್ಲಿ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿದ್ದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ.
ಸಂತೋಷ ಮಲಕಪ್ಪ ಲಾಳಸಂಗಿ, ರೋಹಿತ್ ರಾಮು ಕಯಗೊಂಡ ಬಂಧಿತ ಆರೋಪಿಗಳು. ಇವರಿಂದ 90 ಸಾವಿರ ರೂ. ಮೌಲ್ಯದ ಚಿನ್ನದ ಬ್ರಾಸಲೆಟ್, 45 ಸಾವಿರ ರೂ. ಮೌಲ್ಯದ ಮಾಂಗಲ್ಯ ಸರ, 90 ಸಾವಿರ ರೂ. ಮೌಲ್ಯದ ಚಿನ್ನಾಭರಣಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ರಹೀಮ್ ನಗರದಲ್ಲಿರುವ ಮನೆಯೊಂದಕ್ಕೆ ನುಗ್ಗಿ ಹಿಂಬಾಗಿಲ ಚಿಲಕ ಮುರಿದು ಕಪಾಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದರು.

ಕೊಲೆ ಪ್ರಕರಣ:

ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಚೆಗೆ ನಡೆದಿದ್ದ ಸಂತೋಷ ಸದಾಶಿವ ಕಾಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ವಿಠ್ಠಲ ಧೂಳಪ್ಪ ಕಾಳೆ, ಅರ್ಜುನ ಧೂಳಪ್ಪ ಕಾಳೆ ಹಾಗೂ ಧೂಳಪ್ಪ ಸುರೇಬಾ ಕಾಳೆ ಬಂಧಿತ ಆರೋಪಿಗಳು. ಈ ಮೂರು ಪ್ರಕರಣಗಳನ್ನು ಭೇದಿಸಿದ ತನಿಖಾ ತಂಡದ ಸದಸ್ಯರಿಗೆ ವಿಶೇಷ ಬಹುಮಾನ ಘೋಷಿಸಿರುವುದಾಗಿ ಎಸ್‌ಪಿ ಆನಂದಕುಮಾರ ತಿಳಿಸಿದರು.
ಡಿವೈಎಸ್‌ಪಿ ಸಿದ್ದೇಶ್ವರ ಕೃಷ್ಣಾಪೂರ ಹಾಗೂ ತನಿಖಾ ತಂಡದ ಸದಸ್ಯರು ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!