ಬಿಜೆಪಿಗೆ ಗುಡ್ ಬೈ ಹೇಳಿದ ರಾಷ್ಟ್ರೀಯ ಕ್ರೀಡಾಪಟು, ಪಾಲಿಕೆ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧೆ
ಸರಕಾರ್ ನ್ಯೂಸ್ ವಿಜಯಪುರ
ಮಹಾನಗರ ಪಾಲಿಕೆ ವಾರ್ಡ್ ನಂ. 35 ರ ಪ್ರತಿ ಷ್ಟೆಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದಾಗಿ ರಾಜು ಬಿರಾದಾರ ತಿಳಿಸಿದರು.
ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾದ ನನಗೆ ಕೆಲವರು ಉದ್ದೇಶ ಪೂರ್ವಕವಾಗಿ ಟಿಕೆಟ್ ತಪ್ಪಿಸಿದ್ದರಿಂದ ಬೇಸತ್ತು ಆ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ನನಗೆ ನೀಡಲಾದ
ನಗರಾಡಳಿತ ಪ್ರಕೋಷ್ಠದ ಸಂಚಾಲಕ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
1995 ರಿಂದ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ನಗರ ಸಭೆ ಇದ್ದಾಗ ಬಿಜೆಪಿ ಟಿಕೆಟ್ ನೀಡಿತ್ತು. ಸ್ವಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದೆ. ಆ ಬಳಿಕ ಪಕ್ಷದ ಹಲವು ಹುದ್ದೆಗಳಿಗೆ ನನ್ನನ್ನು ನೇಮಕ ಮಾಡಲಾಗಿತ್ತು. ಪಕ್ಷ ಸಂಘಟನೆಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಜಿಲ್ಲಾ ಉಪಾಧ್ಯಕ್ಷನಾಗಿ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದೇ ನೆ. ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷನಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ಆದರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ತಿಳಿಸಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಅವರಿಗೆ ಅರ್ಜಿ ಸಲ್ಲಿಸಿದ್ದೆ. ಕೊನೇ ಕ್ಷಣದವರೆಗೂ ಅಭ್ಯರ್ಥಿ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಬಿಜೆಪಿಯಿಂದ ನಾಮ ಪತ್ರವೂ ಸಲ್ಲಿಸಿದ್ದೆ. ಆದರೆ ಬಿ- ಫಾರ್ಮ್ ಸಿಗಲಿಲ್ಲ. ಹೀಗಾಗಿ ಕಣದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೆ. ಆದರೆ ವಾರ್ಡ್ ನ ಪ್ರಮುಖರೆಲ್ಲರೂ ಸೇರಿ ಒತ್ತಾಯದಿಂದ ಕಣಕ್ಕೆ ಇಳಿಸಿದರು. ಹೀಗಾಗಿ ಪಕ್ಷೇತರನಾಗಿ ಕಣಕ್ಕಿಳಿಯುವುದು ಅನಿವಾರ್ಯವಾಯಿತು ಎಂದರು.
ಸದ್ಯ ಬಿಜೆಪಿ ಅಭ್ಯರ್ಥಿಯಾಗಿರುವ ರಾಜಶೇಖರ ಕುರಿ ಎಂಬುವವರು ಯೋಗಾಪುರ ಕಾಲನಿಯಲ್ಲಿರುವವರು. ವಾರ್ಡ್ ನಿಂದ ಬಹಳ ದೂರ ಇದ್ದಾರೆ. ಅಂಥವರನ್ನು ಕರೆದು ತಂದು ಅಭ್ಯರ್ಥಿ ಯನ್ನಾಗಿಸಿದ್ದಾರೆ. ಇದರ ಹಿಂದೆ ಹೊಂದಾಣಿಕೆ ರಾಜಕಾರಣ ಇದೆ. ಇದೆಲ್ಲ ಗಮನಿಸಿದ ಪಕ್ಷದ ಕಾರ್ಯಕರ್ತರು ಹಾಗೂ ವಾರ್ಡ್ ಜನತೆಗೆ ನೋವಾಗಿ ನನ್ನನ್ನು ಬಲವಂತವಾಗಿ ಕಣಕ್ಕಿಳಿಸಿದ್ದಾರೆ ಎಂದರು.
ಮುಖಂಡರಾದ ವಿಶ್ವನಾಥ ಬೋಸಲೆ, ಶ್ರೀಶೈಲ ಬುಕ್ಕಣ್ಣಿ, ಪಪ್ಪು ಮುಳಸಾವಳಗಿ, ಶಂಕರ ಮಠ, ರಾಜು ಹುನ್ನೂರ ಮತ್ತಿತರರಿದ್ದರು.