ನಾಗಠಾಣ ಶಾಸಕರ ಜನಪರ ಕಾಳಜಿ, ಮಳೆ ಸಂತ್ರಸ್ತರಿಗೆ ತ್ವರಿತ ಸ್ಪಂದನೆ, ಡಿಸಿ-ಆಯುಕ್ತರೊಂದಿಗೆ ತೆರಳಿ ಮಾಡಿದ್ದೇನು ಗೊತ್ತಾ?
ಸರ್ಕಾರ್ ನ್ಯೂಸ್ ವಿಜಯಪುರ
ಮಹಾನಗರ ಪಾಲಿಕೆ ವ್ಯಾಪ್ತಿಯ ನಾಗಠಾಣ ವಿಧಾನ ಸಭೆ ಕ್ಷೇತ್ರದ ವಾರ್ಡ್ ನಂ.14ರಲ್ಲಿ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡ ಹಿನ್ನೆಲೆ ಶಾಸಕ ಡಾ.ದೇವಾನಂದ ಚವಾಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಶನಿವಾರ ಮಧ್ಯಾಹ್ನ ಸುರಿದ ರಣಮಳೆಗೆ ವಾರ್ಡ್ ನಂ.14ರ ಶಿಕಾರಖಾನೆಯ ಖಾವಿ ಪ್ಲಾಟ್‌ನಲ್ಲಿ ಮನೆಗಳಿಗೆ ನೀರು ನುಗ್ಗಿತು. ಪ್ರತಿ ಮನೆಗಳಲ್ಲಿ ಚರಂಡಿ ನೀರು ನಿಂತಿದ್ದರಿಂದ ಜನ ಸಂಕಷ್ಟಕ್ಕೆ ಸಿಲುಕಿದರು. ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ದೇವಾನಂದ ಚವಾಣ್ ಸ್ಥಳಕ್ಕೆ ದೌಢಾಯಿಸಿದರು. ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹಾಗೂ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಇವರನ್ನು ಸ್ಥಳಕ್ಕೆ ಬರಮಾಡಿಕೊಂಡು ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಿದರು.
ಮಳೆ ನೀರು ನುಗ್ಗಿದ್ದರಿಂದ ಅಪಾರ ಹಾನಿಯಾಗಿದೆ. ದಿನ ಬಳಕೆ ಸಾಮಗ್ರಿಗಳು, ದಿನಸಿ ಹಾಳಾಗಿವೆ. ಚರಂಡಿ ನೀರು ಮನೆಗಳಿಗೆ ನುಗ್ಗಿ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರಿಂದ ತ್ವರಿತ ಪರಿಹಾರ ಕಲ್ಪಿಸಲು ಶಾಸಕ ದೇವಾನಂದ ಚವಾಣ್ ಅಧಿಕಾರಿಗಳಿಗೆ ಸೂಚಿಸಿದರು.
ಈ ಪ್ರದೇಶದಲ್ಲಿ ಪದೇ ಪದೇ ಮಳೆ ಬಂದಾಗ ನೀರು ಮನೆಗಳಿಗೆ ನುಗುತ್ತಿದೆ. ಕಾರಣ ಇಲ್ಲಿ ಗಟಾರ್‌ಗಳನ್ನು ರಿಪೇರಿ ಮಾಡಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದರೂ ಈವರೆಗೂ ಪರಿಹಾರ ಕಲ್ಪಿಸಿಲ್ಲ. ಹೀಗಾಗಿ ಇನ್ನಾದರೂ ತ್ವರಿತ ಪರಿಹಾರ ಕಲ್ಪಿಸಬೇಕು. ಜೊತೆಗೆ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಪರಿಹಾರ ಕಲ್ಪಿಸಬೇಕೆಂದು ಸೂಚಿಸಿದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹಾಗೂ ಆಯುಕ್ತ ವಿಜಯ ಮೆಕ್ಕಳಕಿ ಸ್ಥಳ ಪರಿಶೀಲನೆ ನಡೆಸಿ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದರು. ಶಾಸಕರ ಕಾಳಜಿಗೆ ಜನರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.