ಉಜನಿ ಜಲಾಶಯದಿಂದ ನೀರು ಬಿಡುಗಡೆ, ಭೀಮಾತೀರದಲ್ಲಿ ಪ್ರವಾಹ ಭೀತಿ, ಬ್ಯಾರೇಜ್‌ಗಳ ಸ್ಥಿತಿಗತಿ ಏನು?
ಸರಕಾರ್ ನ್ಯೂಸ್ ವಿಜಯಪುರ
ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ್ದರಿಂದ ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ಕಳೆದೆರಡು ದಿನಗಳಿಂದ ಮಳೆ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಜಲಾಶಯ, ಬ್ಯಾರೇಜ್‌ಗಳು ಭರ್ತಿಯಾಗಿವೆ. ಉಜನಿ ಜಲಾಶಯದಿಂದ ಶನಿವಾರ ಏಕಾಏಕಿ 60 ಸಾವಿರ ಕ್ಯೂಸೆಕ್ ನೀರು ಹರಿಸಿದ್ದರಿಂದ ಭೀಮಾ ನದಿ ಪಾತ್ರದ ಬ್ಯಾರೇಜ್‌ಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದೆ.ಹೀಗಾಗಿ ಬಹುತೇಕ ಬ್ಯಾರೇಜ್‌ಗಳ ಮೇಲಿನ ಸಾರಿಗೆ ಸಂಪರ್ಕ ಸ್ಥಗಿತಗೊಳಿಸಲಾಗಿದೆ.
ಆಲಮೇಲ ತಾಲೂಕಿನ ಬಗಲೂರ ಗ್ರಾಮದ ಸೇತುವೆ ಮೇಲೆ ನೀರು ಬಂದ ಕಾರಣ ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ಮಾರ್ಗ ಸುಕ್ಷೇತ್ರ ಘತ್ತರಗಿಗೆ ಸಂಪರ್ಕ ಕಲ್ಪಿಸುವ ಕಾರಣ ಬಾಗಮ್ಮ ದೇವಿ ದರ್ಶನಕ್ಕೆ ಹೋಗುವ ಭಕ್ತಾದಿಗಳಿಗೆ ದರ್ಶನ ಭಾಗ್ಯ ಮರೀಚಿಕೆಯಾಗಿದೆ. ದರ್ಶನ ಮುಂದೂಡುವಂತೆ ಅಧಿಕಾರಿಗಳು ಭಕ್ತಾದಿಗಳಿಗೆ ಮನವಿ ಮಾಡಿದ್ದಾರೆ.
ಭೀಮಾನದಿಗೆ ಅಡ್ಡಲಾಗಿ ಕರ್ನಾಟಕ ಭಾಗದಲ್ಲಿ ಒಟ್ಟು 8 ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲಾಗಿದೆ. ಇದರಲ್ಲಿ ಏಳು ಬ್ಯಾರೇಜ್‌ಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಸಾರಿಗೆ ಸಂಪರ್ಕ ಸ್ಥಗಿತಗೊಳಿಸಲಾಗಿದೆ.
ಧೂಳಖೇಡ ಬಳಿಯ ಬ್ಯಾರೇಜ್ ಮೇಲಿನ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿದ್ದರಿಂದ ಮತ್ತು ಅದರ ಮೇಲೆ ನೀರಿನ ಹರಿವು ಇಲ್ಲವಾದ ಕಾರಣ ಸಂಪರ್ಕಕ್ಕೆ ಅವಕಾಶ ಕಲ್ಪಿಸಲಾಗಿದೆ. ಸೊನ್ನ ಹಾಗೂ ಅಫಜಲಪುರ ಬ್ಯಾರೇಜ್‌ನಿಂದ ಇನ್ನೂ ಹೊರಹರಿವು ಆರಂಭಗೊಂಡಿಲ್ಲ. ಹೀಗಾಗಿ ಹಿನ್ನೀರಿನಿಂದ ಸಮಸ್ಯೆಯಾಗದಂತೆ ಅಧಿಕಾರಿಗಳು ಮುಂಜಾಗೃತೆ ವಹಿಸಿದ್ದಾರೆ.