ಭೂಕಂಪನದಿಂದ ಬತ್ತಿತೇ ಬಾವಿ? 15-16 ಅಡಿ ಪಾತಾಳಕ್ಕಿಳಿದ ಗಂಗಾಜಲ…ಏನಿದು ಅಚ್ಚರಿ?
ಸರಕಾರ್ ನ್ಯೂಸ್ ವಿಜಯಪುರ
ಭೂಕಂಪದ ತೀವ್ರತೆಯಿಂದ ಬೆಚ್ಚಿದ ಗುಮ್ಮಟ ನಗರಿಯ ಜನರಿಗೆ ಅಚ್ಚರಿಯೊಂದು ಕಾದಿದೆ….!
ಶನಿವಾರ ಬೆಳ್ಳೆಂಬಳಗ್ಗೆ ಸವಿನಿದ್ರೆಯಲ್ಲಿದ್ದ ಜನರಿಗೆ ಭೂ ಕಂಪನ ಶಾಕ್ ನೀಡಿದ ಬೆನ್ನಲ್ಲೇ ಒಂದೊಂದೇ ಅಚ್ಚರಿಗಳು ಹೊರಬೀಳುತ್ತಿವೆ. ಬೆಳಗ್ಗೆ 6.22ರ ಸುಮಾರಿನ ಅವಧಿಯಲ್ಲಿ ಕನ್ನೂರಿನ ಉತ್ತರ-ಪಶ್ಚಿಮ ಭಾಗದಲ್ಲಿ 10 ಕಿ.ಮೀ ಆಳದಲ್ಲಿ 4.4 ತೀವ್ರತೆಯಲ್ಲಿ ಭೂಮಿ ನಡುಗಿದ್ದು, ವಿವಿಧೆಡೆ ಆತಂಕದ ಜೊತೆಗೆ ಅಚ್ಚರಿಯೂ ಮನೆ ಮಾಡುವಂತೆ ಮಾಡಿದೆ.
ಕೆಲವೆಡೆ ಮನೆಗಳು ಉರುಳಿದ್ದರೆ ಇನ್ನೂ ಕೆಲವೆಡೆ ಪವಾಡ ಸದೃಶ ಘಟನೆಗಳು ಸಂಭವಿಸಿವೆ. ತಿಕೋಟಾ ತಾಲೂಕಿನ ಅರಕೇರಿ ಎಲ್‌ಟಿ ನಂ.-2ರಲ್ಲಿಯ ಬಾಲರಾಜ ಹಣಮಂತ ರಾಠೋಡ ಇವರ ಹಳೆಯ ಕಚ್ಚಾ ಮನೆಯ ಹಿಂಭಾಗದ ಮೂಲ ಭಾಗ ಭಾಗಶಃ ಹಾನಿಯಾಗಿದೆ. ಅರಕೇರಿ ಗ್ರಾಮದ ತೋಟದ ವಸ್ತಿಯ ಮಲಕಾರಿಸಿಂಗ ಭೀಮಸಿಂಗ್ ರಜಪೂತ ಇವರ ಹಳೆಯ ಕಚ್ಚಾ ಮನೆಯ ಹಿಂಭಾಗದ ಗೋಡೆ ಭಾಗಶಃ ಹಾನಿಯಾಗಿದೆ. ಅರಕೇರಿ ಗ್ರಾಮದಲ್ಲಿನ 20 ಹಳೆಯ ಕಟ್ಟಡಗಳ ಮನೆಗಳ ಗೋಡೆಗಳಲ್ಲಿ ಬಿರುಕು ಬಿಟ್ಟಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪಂಚನಾಮೆ ಮಾಡಿದ್ದಾರೆ.
ಏಕಾಏಕಿ ಬತ್ತಿದ ಬಾವಿ:
ಭೀಮಾತೀರದ ಬಳ್ಳೊಳ್ಳಿಯ ತೋಟದ ವಸ್ತಿಯೊಂದರಲ್ಲಿ ಬಾವಿಯೊಂದು ಏಕಾಏಕಿ ಬತ್ತಿದೆ. ಆಳವಾದ ಬಾವಿಯಲ್ಲಿ ನೀರಿತ್ತು. ಭೂಕಂಪನ ಸಂಭವಿಸಿದ ಬೆನ್ನಲ್ಲೇ ನೀರು 15ರಿಂದ 16 ಅಡಿ ಕುಸಿದಿದೆ. ಸದ್ಯ ಬಾವಿಯಲ್ಲಿ ನೀರೇ ಇಲ್ಲದಂತಾಗಿರುವುದು ಅಚ್ಚರಿಯ ಸಂಗತಿ. ಈ ಬಗ್ಗೆ ರೈತರು ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ.