ಬೊಮ್ಮಾಯಿ ಬಜೆಟ್‌ನಲ್ಲಿ ವಿಜಯಪುರಕ್ಕೆ ಸಿಕ್ಕಿದ್ದೇನು? ಇಲ್ಲಿದೆ ನೋಡಿ ಸಮಗ್ರ ಮಾಹಿತಿ…..
ವಿಜಯಪುರ: ಉತ್ತರ ಕರ್ನಾಟಕದವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ನೇ ಸಾಲಿನ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ವಿಜಯಪುರ ಜಿಲ್ಲೆಗೆ ಅನುಪಮ ಕೊಡುಗೆ ನೀಡಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಸಮರ್ಪಕ ಅನುಷ್ಟಾನಕ್ಕೆ 5000 ಕೋಟಿ ರೂ.,ಮೀಸಿಟ್ಟಿದ್ದಾರೆ. ಆದರೆ, ಈ ಮೊತ್ತ ನಿರೀಕ್ಷೆಗಿಂತ ಕಡಿಮೆ ಎನ್ನಲಾಗಿದೆ. ಸದರಿ 5000 ಕೋಟಿ ರೂ.ಅನುದಾನದಲ್ಲಿ ಭೂಸ್ವಾಧೀನ, ಪುನರ್‌ವಸತಿ ಹಾಗೂ ಪುನರ್ ನಿರ್ಮಾಣ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1 ಮತ್ತು 2 ರಲ್ಲಿನ ಬೂದಿಹಾಳ, ಪೀರಾಪುರ, ನಂದವಾಡಗಿ, ನಾರಾಯಣಪುರ (9ಎ) ಕಾಲುವೆ ವಿಸ್ತರಣೆ ಯೋಜನೆಗಳು ಸೇರಿದ್ದು, ಕೇಂದ್ರ ಸರ್ಕಾರದಿಂದ ಅಗತ್ಯ ತಿರುವಳಿಗಳನ್ನು ಪಡೆದು ಕೇಂದ್ರ ಸಹಾಯಧನದೊಂದಿಗೆ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಆಲಮಟ್ಟಿ ಹಿನ್ನೀರಿನಲ್ಲಿ ಸಾಹಸ ಕ್ರೀಡಾ ತರಬೇತಿ ನೀಡಲು ತೀರ್ಮಾನಿಸಲಾಗಿದೆ.
ಇನ್ನು ತೋಟಗಾರಿಕೆಗೆ ಹೆಸರಾದ ರಾಜ್ಯದ ದ್ರಾಕ್ಷಿ ಕಣಜ ಖ್ಯಾತಿಯ ವಿಜಯಪುರ ದ್ರಾಕ್ಷಿ ಬೆಳೆಗಾರರಿಗೆ ಸಿಎಂ ಬೊಮ್ಮಾಯಿ ಸಿಹಿ ಸುದ್ದಿ ನೀಡಿದ್ದಾರೆ. ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿ ಮೂಲಕ ತೊರವಿ ಗ್ರಾಮದಲ್ಲಿ 35 ಕೋಟಿ ರೂ.ವೆಚ್ಚದಲ್ಲಿ ಅತ್ಯಧುನಿಕ ಶೈತ್ಯ ಸಂಗ್ರಹ ಸೌಲಭ್ಯವನ್ನು ಪಿಪಿಪಿ ಆಧಾರದ ಮೇಲೆ ನಿರ್ಮಿಸಿ ದ್ರಾಕ್ಷಿ ಬೆಳೆಯ ಸಂಗ್ರಹಣೆ, ಸಂಸ್ಕರಣೆ ಮತ್ತು ಸಾಗಾಣೆಯನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಶೀತಲೀಕೃತ ಸರಕು ಸಾಗಣೆ ವಾಹನಗಳನ್ನು ಒದಗಿಸಲು ಘೋಷಿಸಲಾಗಿದೆ.
ಮಡಿವಾಳಮಾಚಿದೇವ ಮೂಲಸ್ಥಾನ ದೇವರಹಿಪ್ಪರಗಿಯಲ್ಲಿ ಮಾಚಿದೇವರ ಎಲ್ಲ ಕುರುಹುಗಳನ್ನು ಅಭಿವೃದ್ಧಿಗೊಳಿಸಿ ಸಾರ್ವಜನಿಕ ಯಾತ್ರಾ ಸ್ಥಳವನ್ನಾಗಿ ಮಾಡಲಾಗುವುದು. ಕಲಬುರಗಿ-ವಿಜಯಪುರದಲ್ಲಿ ಮೆಗಾ ಟೆಕ್ಸಟಲ್ ಪಾರ್ಕ್‌ನ್ನು ಕೇಂದ್ರ ಸರ್ಕಾರದ ನೆರವಿನೊಂದಿಗೆ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು. ಪ್ರವಾಸೋದ್ಯಮ ಉತ್ತೇಜನಕ್ಕೆ ಪ್ರವಾಸಿ ವೃತ್ತ ಸ್ಥಾಪಿಸಲಾಗುವುದು. ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ರಸ್ತೆ ಸುರಕ್ಷತಾ ನಿಧಿಯಡಿ ಸ್ಥಾಪನೆ ಮಾಡಲು ಬಜೆಟ್‌ನಲ್ಲಿ ತಿಳಿಸಲಾಗಿದೆ.