ಸೂರ್ಯ ಚಂದ್ರ ಇರೋವರೆಗೂ ಬಸವ, ಭಗತ್, ಕುವೆಂಪು ವಿಚಾರ ಅಳಿಸಲಾಗಲ್ಲ, ಸರ್ಕಾರಕ್ಕೆ ಡಾ.ಎಂ.ಬಿ. ಪಾಟೀಲ ಚಾಟಿ
ಸರಕಾರ್ ನ್ಯೂಸ್ ವಿಜಯಪುರ
ಪಠ್ಯ ಪರಿಷ್ಕರಣೆ ವಿವಾದ ರಾಜ್ಯಾದ್ಯಂತ ಭಾರಿ ಸದ್ದು ಮಾಡುತ್ತಿದ್ದು ಈಗಾಗಲೇ ಪರ ವಿರೋದ ಚರ್ಚೆ ಜೋರಾಗಿದೆ. ಈ ಮಧ್ಯೆ ಬಸವಣ್ಣ ಹಾಗೂ ಕುವೆಂಪು ಅವರ ಇತಿಹಾಸ ತಿರುಚಲಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ. ಪಾಟೀಲ ಸೂರ್ಯ ಚಂದ್ರ ಇರುವವರೆಗೂ ಮಹತ್ಮರ ವಿಚಾರಗಳನ್ನು ತಿರುಚಲು ಆಗಲ್ಲ ಎಂದಿದ್ದಾರೆ.
ಸೋಮವಾರ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನ ಪರಿಷತ್ ವಾಯವ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಹಾಗೂ ಪದವೀಧರ ಅಭ್ಯರ್ಥಿ ಸುನೀಲ ಸಂಖ ಪ್ರಚಾರಾರ್ಥವಾಗಿ ಏರ್ಪಡಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ಹೇಳಿಕೆ ನೀಡಿದರು.
ಬಸವಣ್ಣನವರ, ಕುವೆಂಪು, ಮಹಾತ್ಮ ಗಾಂಧಿ, ಭಗತ್ ಸಿಂಗ್ ವಿಚಾರವನ್ನು ಸೂರ್ಯ, ಚಂದ್ರ ಇರುವವರೆಗೂ ತಿರುಚಲು ಸಾಧ್ಯ ಇಲ್ಲ. ಡಾ.ಬಾಬಾಸಾಹೇಬ ಅಂಬೇಡ್ಕರ್, ಕಿತ್ತೂರ ರಾಣಿ ಚನ್ನಮ್ಮ, ಸರದಾರ್ ವಲ್ಲಭಬಾಯಿ ಪಟೇಲ, ವಿವೇಕಾನಂದ ಹೀಗೆ ರಾಷ್ಟ್ರ ಕಟ್ಟಿದ ಮಹನೀಯರ ಇತಿಹಾಸ ತಿರುಚಲು ಬಿಡಲ್ಲ. ಇದನ್ನು ಕಾಂಗ್ರೆಸ್ ಸಹಿಸಲ್ಲ ಎಂದರು.
ಈಗಾಗಲೇ ಪರಿಷ್ಕರಣೆಗೊಂಡ ಪಠ್ಯ ಕೂಡಲೇ ಕೈಬಿಡಬೇಕು. ನಾಡಿನಲ್ಲಿ ಅನೇಕ ಶ್ರೇಷ್ಠ ಸಾಹಿತಿಗಳು, ಚಿಂತಕರು ಇದ್ದಾರೆ. ಅವರನ್ನು ಒಳಗೊಂಡ ಸಮಿತಿ ಮಾಡಿ ಹೊಸ ಪಠ್ಯ ರಚನೆ ಮಾಡಬೇಕು ಎಂದರು.
ಇನ್ನು ಹೆಡಗೇವಾರ್, ಸಾವರಕರ ಇತಿಹಾಸ ಬೇಕಾದರೆ ಹಾಕಿ. ಆದರೆ ನೈಜ ಇತಿಹಾಸ ಹಾಕಿ. ಸಾವರಕರ ಕ್ಷಮಾಪಣೆ ಕೇಳಿದ್ದನ್ನೂ ಹಾಕಿ ಎಂದು ವ್ಯಂಗ್ಯವಾಡಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಬಿಜೆಪಿ ತನ್ನ ಅಜೆಂಡಾವನ್ನು ಮಕ್ಕಳ ಮೇಲೆ ಹೇರಲು ಹೊರಟಿದೆ. ಪಠ್ಯಪರಿಸ್ಕರಣೆ ವಿವಾದ ಗಮನಿಸಿದರೆ ಇದೆಲ್ಲ ಗಮನಕ್ಕೆ ಬರಲಿದೆ. ಹೀಗಾಗಿ ನೂತನ ಶಿಕ್ಷಣ ನೀತಿಯನ್ನೇ ಕಾಂಗ್ರೆಸ್ ಬದಲಿಸಲಿದೆ ಎಂದರು.
ವಿಧಾನ ಪರಿಷತ್ ವಾಯವ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ, ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನೀಲ ಸಂಖ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ, ಹಮೀದ್ ಮುಶ್ರೀಫ್, ಸಾಹೇಬಗೌಡ ಬಿರಾದಾರ, ಸಂಗಮೇಶ ಬಬಲೇಶ್ವರ, ಸುರೇಶ ಘೊಣಸಗಿ ಮತ್ತಿತರರು ಇದ್ದರು.