ಭೂ ಕಂಪನಕ್ಕೆ ಬೆಚ್ಚದಿರಿ, ಮಳೆಗೆ ಅಂಜದಿರಿ, ಪ್ರಾಕೃತಿಕ ವಿಕೋಪದ ಬಗ್ಗೆ ಡಿಸಿ ಹೇಳಿದ್ದೇನು ಗೊತ್ತಾ?
ಸರಕಾರ್ ನ್ಯೂಸ್ ವಿಜಯಪುರ
ವಿಜಯಪುರ ಜಿಲ್ಲೆಯ ಕಣ್ಣೂರು ಸೇರಿದಂತೆ ವಿವಿಧೆಡೆ ಜುಲೈ 9 ರಂದು ಬೆಳಗಿನ ಜಾವ 4.4 ತೀವ್ರತೆಯ ಲಘು ಭೂಕಂಪ ಸಂಭವಿಸಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ಸಾರ್ವಜನಿಕರು ಭಯಪಡಬಾರದು ಎಂದು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.
ಭೂಕಂಪನದ ವಿಷಯ ತಿಳಿಯದಂತೆ ಕರ್ನಾಟಕ ನೈಸರ್ಗಿಕ ವಿಕೋಪ ಬೆಂಗಳೂರಿನ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಭೂಕಂಪನದ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ವಿಜಯಪುರ ಮತ್ತು ಮಹಾರಾಷ್ಟ್ರ ಪ್ರದೇಶದ ಗಡಿ ವಿವಿಧೆಡೆ ಈ ಲಘು ಭೂಕಂಪನ ಸಂಭವಿಸಿದೆ. ಜುಲೈ 9 ರಂದು ಬೆಳಗಿನ 6.22ರ ಸುಮಾರಿನ ಅವಧಿಯಲ್ಲಿ ಕನ್ನೂರಿನ ಉತ್ತರ-ಪಶ್ಚಿಮ ಭಾಗದಲ್ಲಿ 10 ಕಿ.ಮೀ ಆಳದಲ್ಲಿ 4.4 ತೀವ್ರತೆಯಲ್ಲಿ ಭೂಮಿ ನಡುಗಿದೆ ಎಂದು ಖಚಿತಪಡಿಸಿಕೊಳ್ಳಲಾಗಿದೆ. ಈ ಕಂಪನದ ತೀವ್ರತೆಯು ವಿಜಯಪುರ ತಾಲ್ಲೂಕಿನ ಮಖಾನಪುರ ಗ್ರಾಮ ಪಂಚಾಯಿತಿಯ ಶಿರನಳ್ಳಿ ಗ್ರಾಮ ಉತ್ತರ ಭಾಗದಲ್ಲಿ, ತಿಡಗುಂಡಿ ವ್ಯಾಪ್ತಿಯ ಡೋಮನಾಳ ಗ್ರಾಮದ ಪಶ್ಚಿಮ ಉತ್ತರ ಭಾಗದಲ್ಲಿ, ವಿಜಯಪುರ ಸಿಟಿಯ ಗ್ರಾಮ ಉತ್ತರ ಭಾಗದಲ್ಲಿ, ಬಸವನಬಾಗೇವಾಡಿ ತಾಲ್ಲೂಕಿನ ಆಲಮ ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಗೋಚರಿಸುತ್ತದೆ.
ಭೂಕಂಪನದ ಬಿಂದುವಿನಿಂದ ಕೇಂದ್ರ ಸುತ್ತಲಿನ 30 ರಿಂದ 40 ಕಿ.ಮೀ ನಿರ್ಮಾಣ ಸಹ ಭೂಮಿ ಕಂಪಿಸಿ ಎಂದು ಬೆಂಗಳೂರು ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರ ಇವರಿಂದ ಮಾಹಿತಿ ಲಭ್ಯವಾಗಿದೆ.
ಜುಲೈ 9 ರ ಬೆಳಗಿನ ಅವಧಿಯಲ್ಲಿ ಭೂಕಂಪನದ ಅನುಭವ ಉಂಟಾಗಿ ಭಾರಿ ಸದ್ದು ಕೇಳಿ ಬಂದಿದೆ ಎಂದು ಜನರು ತಿಳಿಸುತ್ತಿದ್ದಾರೆ. ಭೂಕಂಪನ ಎಂದಾಕ್ಷಣ ಜನರು ಸಹಜವಾಗಿ ಭಯಭೀತರಾಗುತ್ತಾರೆ. ಆದರೆ, ಭೂಕಂಪನವು ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆಯಲ್ಲಿ ದಾಖಲಾಗಿದೆ. ಆದ್ದರಿಂದ ಸಾರ್ವಜನಿಕರು ಆತಂಕಪಡಬಾರದು ಎಂದು ಜಿಲ್ಲಾಧಿಕಾರಿಗಳು ಧೈರ್ಯ ತುಂಬಿದ್ದಾರೆ.
ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರರು ಭೂಕಂಪನದ ಬಗ್ಗೆ ಖಚಿತಪಡಿಸಿಕೊಂಡು, ವರದಿ ಮಾಡಲು ಸಹ ತಿಳಿಸಲಾಗಿದೆ ಎಂದು ಅವರು ಸೂಚಿಸಿದ್ದಾರೆ.
ಮಳೆಯಿಂದ ಹಾನಿ ಇಲ್ಲ:
ಜುಲೈ 8 ರಾತ್ರಿಯಿಂದ ಇಲ್ಲಿಯವರೆಗೆ ಮಳೆಯಿಂದಾಗಿ ಯಾವುದೇ ರೀತಿಯ ಜೀವಹಾನಿ ಪ್ರಕರಣಗಳು ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಮಳೆಯಿಂದಾಗಿ ಜನಜೀವನಕ್ಕೆ ತೊಂದರೆಯಾದಾಗ ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ಅನುದಾನದ ಕೊರತೆಯಿಲ್ಲ. ಮಳೆ ಮತ್ತು ಪ್ರವಾಹದಿಂದ ಹಾನಿಯಾದಾಗ ಪರಿಹಾರಕ್ಕೆ ತಕ್ಷಣದ ಕ್ರಮ ವಹಿಸಲಾಗುವುದು ಎಂದು ಅವರು ಸೂಚಿಸಿದರು.
ಸ್ಥಳಕ್ಕೆ ಅಧಿಕಾರಿಗಳ ಭೇಟಿ:
ಜಿಲ್ಲಾಧಿಕಾರಿಗಳ ಸೂಚನೆಯಂತೆ, ಭೂಕಂಪನ ಸ್ಥಳಕ್ಕೆ ಇಂಡಿ ಸಹಾಯಕ ಆಯುಕ್ತರಾದ ರಾಮಚಂದ್ರ ಗಡಾದಿ ಮತ್ತು ಕನ್ನೂರ ಗ್ರಾಮಕ್ಕೆ ವಿಜಯಪುರ ತಹಸೀಲ್ದಾರ ಸಿದ್ದರಾಮ ಬೋಸಗಿ ಅವರು ಜುಲೈ 9 ರಂದು ಭೇಟಿ ನೀಡಿ ಮಾಹಿತಿ ಪಡೆದರು. ಭೂಕಂಪನ ಹಾನಿಯ ಬಗ್ಗೆ ವಿಚಾರಿಸಿದರು. ಭೂಕಂಪನದ ಬಗ್ಗೆ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೊಳಗಾಗಬಾರದು ಎಂದು ಧೈರ್ಯ ತುಂಬಿದರು. ವಿಜಯಪುರ ತಹಸೀಲ್ದಾರರು ವಿಜಯಪುರ ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಹಾನಿಯ ಬಗ್ಗೆ ವಿಚಾರಿಸಿದರು.
24 ಗಂಟೆಗಳಲ್ಲಿ 9.12 ಮಿ.ಮೀ ಮಳೆ:
ಜುಲೈ 8 ರ ಬೆಳಗ್ಗೆ 8 ರಿಂದ ಜುಲೈ 9 ರ ಬೆಳಗಿನ 8 ಗಂಟೆಯವರೆಗೆ 24 ಗಂಟೆಗಳ ಅವಧಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ 9,12 ಮೀ ನಷ್ಟು ಮಳೆ ಸುರಿದಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ರಾಕೇಶ ಜೈನಾಪುರ ಅವರು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ಬಬಲೇಶ್ವರ ತಾಲ್ಲೂಕಿನಲ್ಲಿ 15.4%, ಇಂಡಿ ತಾಲ್ಲೂಕಿನಲ್ಲಿ 15.1% ಮತ್ತು ನಿಡಗುಂದಿ ತಾಲ್ಲೂಕಿನಲ್ಲಿ 10.9% ಸುರಿದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.