ವಿಜಯಪುರದ ಶಿಕ್ಷಕ ಸಿಒಡಿ ತನಿಖೆಗೆ, ಕಾರಣ ಕೇಳಿದರೆ ಅಚ್ಚರಿಯಾಗದಿರದು?
ಸರಕಾರ್ ನ್ಯೂಸ್ ವಿಜಯಪುರ
ಸದಾ ಒಂದಿಲ್ಲ ಒಂದು ಕಾರಣಕ್ಕೆ ರಾಜ್ಯದ ಗಮನ ಸೆಳೆಯುವ ವಿಜಯಪುರ ಜಿಲ್ಲೆ ಇದೀಗ ಶಿಕ್ಷಕರ ಅಕ್ರಮ ನೇಮಕದ ವಿಚಾರದಲ್ಲೂ ಗಮನ ಸೆಳೆಯುತ್ತಿದೆ !
ರಾಜ್ಯದಲ್ಲಿ ಪಿಎಸ್ಐ ಹಗರಣದ ಬಳಿಕ ಶಿಕ್ಷಕರ ನೇಮಕದ ಹಗರಣದ ಚರ್ಚೆಯೂ ಜೋರಾಗಿದೆ. ರಾಜ್ಯಾದ್ಯಂತ ಸಕ್ರಿಯವಾಗಿರುವ ಸಿಒಡಿ ತಂಡ ಇದೀಗ ಅಕ್ರಮದ ಘಾಟು ಹಿಡಿದು ವಿಜಯಪುರಕ್ಕೆ ಭೇಟಿ ನೀಡಿದೆ.
ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದಿರುವ ಸಿಒಡಿ ಅಧಿಕಾರಿಗಳು ಸೆ. 19ರಂದು ಸಂಜೆ ಮತ್ತೋರ್ವನನ್ನು ವಶಕ್ಕೆ ಪಡೆದಿದೆ. ಸಾರ್ವಜನಿಕ ಶಿಕ್ಷಣ ಪ್ರತಿ ಇಲಾಖೆ ಅಧಿಕಾರಿಗಳು ಎಫ್‌ಐಆರ್‌ಗಾಗಿ ಎದುರು ನೋಡುತ್ತಿದ್ದಾರೆ.
ಅಂದಹಾಗೆ ವಿಚಾರಣೆಗೆ ಒಳಪಟ್ಟ ಶಿಕ್ಷಕ ಯಾರು? ಎಂಬ ಕುತೂಹಲವೇ?
ಮೂಲತಃ ವಿಜಯಪುರದವರಾದ ಅಶೋಕ ಚವಾಣ್ ಸಿಒಡಿ ವಿಚಾರಣೆಗೆ ಒಳಪಟ್ಟ ಶಿಕ್ಷಕ. ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಶಿಕ್ಷಕ ಮೊದಲು ಚಿತ್ರದುರ್ಗ ಜಿಲ್ಲೆಯ ಜಗಳೂರಿನಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಭೈರವಾಡಗಿ ಶಾಲೆಗೆ ವರ್ಗವಾಗಿದ್ದರು. ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದ ವಿಚಾರವಾಗಿ ಇವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಇದಕ್ಕೂ ಮೊದಲು ಕಪನಿಂಬರಗಿ ಸರ್ಕಾರಿ ಶಾಲೆಯ ಶಿಕ್ಷಕ ಸಿದ್ರಾಮಪ್ಪ ಬಿರಾದಾರ ಹಾಗೂ ಹತ್ತಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಮಹೇಶ ಸುಸಲಾದಿ ಸಿಯೋಡಿ ವಿಚಾರಣೆಗೆ ಒಳಪಟ್ಟಿದ್ದಾರೆ. ಇನ್ನೂ ಒಬ್ಬ ಮಹಿಳೆ ಇದ್ದು ಆ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.