ಅನೈತಿಕ ಸಂಬಂಧದ ಸಂಶಯ, ಚಾಕು ಚುಚ್ಚಿ ಕೊಲೆ, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಸರಕಾರ ನ್ಯೂಸ್ ವಿಜಯಪುರ
ಕೊಲೆ ಅಪರಾಧಿಗಳಿಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತ ಸತ್ರ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿದೆ.
ಮುದ್ದೇಬಿಹಾಳದ ಹಡಲಗೇರಿ ಗ್ರಾಮದ ಗಂಗನಗೌಡ ಹನಮಗೌಡ ಗೌಡರ ಮತ್ತು ಮಂಜುನಾಥ ಯಲಗೂದಪ್ಪ ಗೌಡರ ಶಿಕ್ಷೆಗೆ ಗುರಿಯಾಗಿದ್ದಾರೆ.
ಈ ಇಬ್ಬರು ಸೇರಿ 2019 ಅ.13ರಂದು ಸಂಜೆ 6ರ ಸುಮಾರಿಗೆ ತಮ್ಮಣ್ಣ ಸಂಗಪ್ಪ ಮೋರ್ಕಿ ಎಂಬಾತನ ಕೊಲೆ ಮಾಡಿದ್ದರು. ಘಟನೆಗೆ ಅನೈತಿಕ ಸಂಬಂಧವೇ ಕಾರಣ ಎನ್ನಲಾಗಿತ್ತು. ಮೃತ ತಮ್ಮಣ್ಣ ಗಂಗನಗೌಡನ ತಾಯಿ ಹಣಮವ್ವಳ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಸಂಶಯದಿಂದ ಗಂಗನಗೌಡ ಚಾಕುವಿನಿಂದ ತಮ್ಮಣ್ಣನಿಗೆ ಇರಿದಿದ್ದನು. ಇದರಲ್ಲಿ ಮಂಜುನಾಥ ಕೂಡ ಭಾಗಿಯಾಗಿದ್ದು, ತಮ್ಮಣ್ಣನನ್ನು ಹಿಡಿದುಕೊಂಡು ಕೊಲ್ಲಲು ಪ್ರೇರೇಪಿಸಿದ್ದನು.
ಈ ಬಗ್ಗೆ ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ಕೈಗೆತ್ತಿಕೊಂಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ಅನಂತ ನಾಲವಾಡೆ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಎಸ್.ಎಚ್. ಹಕೀಮ ಪ್ರಬಲ ವಾದ ಮಂಡಿಸಿದ್ದರು.
(ಕ್ಷಣ ಕ್ಷಣ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)