ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿಕೆ, ಭೀಮಾಶಂಕರ ಸಕ್ಕರೆ ಕಾರ್ಖಾನೆ ವಿಷಯದಲ್ಲಿ ಆರೋಪ, ರವಿಕಾಂತ ಪಾಟೀಲ ಮೇಲೆ ಮಾನ ನಷ್ಟ ಮೊಕದ್ದಮೆ ದಾಖಲು !
ವಿಜಯಪುರ: ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಟೀಕಿಸಿರುವವರ ಮೇಲೆ ಮಾನ ನಷ್ಟ ಮೊಕದ್ದಮೆ ದಾಖಲಿಸುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಒಂದೇ ಒಂದು ರೂಪಾಯಿ ದುರ್ಬಳಕೆಯಾದರೆ ಕೇವಲ ಅಧ್ಯಕ್ಷ ಸ್ಥಾನಕ್ಕೆ ಮಾತ್ರವಲ್ಲ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವೆ. ಕಾರ್ಖಾನೆ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸಿದವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಉತ್ತರ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕಾರ್ಖಾನೆ ಏಳಿಗೆ ಬಗ್ಗೆ ನೀವು ಮಾಡಿದ್ದೇನು? ನಾನು ಸಾಧಿಸಿದ್ದೇನು? ಎಂಬುದರ ಬಗ್ಗೆ ನೀವೇ ಆತ್ಮಾವಲೋಕನ ಮಾಡಿಕೊಳ್ಳಿ ಎಂದರಲ್ಲದೇ ಕಾರ್ಖಾನೆ ವಿಷಯದಲ್ಲಿ ರಾಜಕೀಯ ಬೆರೆಸಬೇಡಿ ಎಂದರು.
ಭೀಮಾತೀರದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ಆಗಬೇಕೆಂಬುದು ಸುಮಾರು 30-40 ವರ್ಷದ ಕನಸಾಗಿತ್ತು. ಅಂಥ ಕನಸು ನನಸು ಮಾಡುವ ನಿಟ್ಟಿನಲ್ಲಿ ಶ್ರಮಿಸಿದ್ದೇನೆ.
ಕಾರ್ಖಾನೆ ಆರಂಭವಾಗಿ ನಾಲ್ಕೈದು ವರ್ಷ ಆಗಿದೆ. ಪ್ರತಿ ವರ್ಷ ಎಫ್ ಆರ್ ಪಿಗಿಂತಲೂ ಹೆಚ್ಚಿನ ದರ ನೀಡಿದ್ದೇವೆ. ಈ ವರ್ಷ 2400 ರೂ.ರೈತರಿಗೆ ನೀಡಿದ್ದೇವೆ. ರೈತರು ಸಂತುಷ್ಟರಾಗಿದ್ದಾರೆ. ಇದನ್ನು ಸಹಿಸದ ಕೆಲವರು ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
1983 ರಲ್ಲಿ ನೋಂದಣಿಯಾಗಿ 2013 ರವರೆಗೂ ಈ ಕಾರ್ಖಾನೆ ನಿರ್ಮಾಣಕ್ಕೆ ಯಾರೊಬ್ಬರೂ ಚಿತ್ತ ಹರಿಸಿರಲಿಲ್ಲ. ನಾನು ಅಧಿಕಾರಕ್ಕೆ ಬಂದು ಬಳಿಕ ಕೊಟ್ಟ ಮಾತಿನಂತೆ ಕಾರ್ಖಾನೆ ನಿರ್ಮಿಸಿದ್ದು ಇತಿಹಾಸ. ಇಷ್ಟೆಲ್ಲಾ ಸಾಧನೆ ಮಾಡಿದರೂ ಕೆಲವು ಕುಹಕ ಶಕ್ತಿಗಳು ಹೆಸರು ಕೆಡಿಸಲು ಮುಂದಾಗಿರುವುದು ನೋಡಿದರೆ ಅವರಿಗೆಲ್ಲ ಕಾರ್ಖಾನೆ ಏಳಿಗೆ ಸಹಿಸಲು ಆಗುತ್ತಿಲ್ಲ ಎಂಬುದು ಗೊತ್ತಾಗುತ್ತದೆ ಎಂದರು.
ನಮ್ಮಲ್ಲಿ ಸ್ವಾರ್ಥ ಹಿತ ಇದ್ದರೆ ಅದನ್ನು ಖಾಸಗಿ ಆಗಿ ಮಾಡಬಹುದಿತ್ತು. ಆದರೆ ಈ ಭಾಗದಲ್ಲಿ ಸಹಕಾರಿ ಕ್ರಾಂತಿ ಇರಬೇಕು ಎಂದು ಬಯಸಿ ಅದರ ಏಳಿಗೆಗೆ ಶ್ರಮಿಸುತ್ತಿದ್ದೇನೆ ಎಂದರು.
ಇಂಥ ಕಾರ್ಖಾನೆ ವರ್ಚಸ್ಸು ಹಾಳು ಮಾಡಲು ಇಚ್ಚಿಸಿದವರಿಗೆ ನೋಟಿಸ್ ನೀಡಲಾಗಿದೆ. ತಪ್ಪಾಯಿತು ಎಂದರೆ ಬಿಡುವೆ. ಇಲ್ಲವೇ ಕಾನೂನು ಕ್ರಮ ಮುಂದುವರಿಯಲಿದೆ ಎಂದರು.
ಯಾವುದೇ ಕಾರ್ಖಾನೆ ಇರಲಿ
ಇನ್ಶುರೆನ್ಸ್ ಮಾಡಿಸುವುದು ಅನಿವಾರ್ಯ. ಅದನ್ನು ಕಟ್ಟಲೇಬೇಕು. ಏನಾದರೂ ಹಾನಿಯಾದರೆ ಜವಾಬ್ದಾರಿ ಯಾರು? ಹೀಗಾಗಿ ಇನ್ಶುರೆನ್ಸ್ ಅವಶ್ಯ. ಅಲ್ಲದೇ ಇನ್ಶುರೆನ್ಸ್ ಕ್ಲೇಮ್ ಮಾಡಲು ವೈಜ್ಞಾನಿಕ ವಿಧಾನ ಇದೆ. ಆ ಪ್ರಕಾರವೇ ನಡೆಯಲಿದೆ. ಮತ್ತು ಅದೇ ರೀತಿ ನಡೆದಿದೆ. ಅದರಲ್ಲಿ ಅವ್ಯವಹಾರ ಎಲ್ಲಿಯದು? ಎಂದರು.
ಗಾಳಿ, ಮಳೆಗೆ ಹಾನಿಯಾಗಿದೆ. ಅದಕ್ಕೆ ಸಾಕ್ಷಿ ಪುರಾವೆಗಳಿವೆ. ಎಲ್ಲಿಯೋ ಕುಳಿತು ಆರೋಪ ಮಾಡೋದಲ್ಲ. ಯಾವುದೇ ಆರೋಪ ಸತ್ಯಕ್ಕೆ ಸಮೀಪ ಇರಬೇಕು. ಇಲ್ಲ ಸಲ್ಲದ ಆರೋಪ ಮಾಡಬಾರದು. ಭೋಗಸ್ ಮಾಡುವ ಕಾಲ ಹೋಯಿತು. ಈಗ ಕಾನೂನು ಕಟ್ಟಳೆಗಳು ಕಠಿಣವಾಗಿವೆ ಎಂದರು.
ಕೊನೇದಾಗಿ ಈಗಲೂ ಅವ್ಯವಹಾರ ಸಾಬೀತು ಪಡಿಸಿದರೆ ಕೇವಲ ಅಧ್ಯಕ್ಷ ಸ್ಥಾನ ಮಾತ್ರವಲ್ಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಾರ್ವಜನಿಕ ಬದುಕಿನಿಂದಲೇ ದೂರವುಳಿಯುವುದಾಗಿ ಪುನರುಚ್ಚರಿಸಿದರು. ಮಾತ್ರವಲ್ಲ ಕಾರ್ಖಾನೆಯ ಮುಂದಿನ ಚುನಾವಣೆಗೆ ಪಂಥಾಹ್ವಾನ ನೀಡಿದರು.