ಸಿಂದಗಿಯಲ್ಲಿ ಬಿಸಿಯೂಟ ಅಕ್ಕಿ ಅಕ್ರಮ ಸಾಗಾಟ ಪ್ರಕರಣ, ಮುಖ್ಯ ಶಿಕ್ಷಕ ಬಿದನೂರ ಅಮಾನತ್ತು
ಸರಕಾರ್ ನ್ಯೂಸ್ ವಿಜಯಪುರ
ಅಕ್ಷರ ದಾಸೋಹ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆ ಸಿಂದಗಿ ತಾಲೂಕಿನ ಬೊಮ್ಮನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶರಣಪ್ಪ ದೊಡ್ಡಪ್ಪ ಬಿದನೂರ ಇವರನ್ನು ಅಮಾನತ್ತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಹರನಾಳ ಆದೇಶಿಸಿದ್ದಾರೆ.
ಜೂ. 10 ರಂದು ರಾತ್ರಿ 10.30ರ ಸುಮಾರಿಗೆ ಬೊಮ್ಮನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಅಕ್ಷರ ದಾಸೋಹ ಯೋಜನೆಯ ಆಹಾರ ಸಾಮಗ್ರಿಗಳನ್ನುಬೇರೆ ಕಡೆಗೆ ದುರುದ್ದೇಶ ಪೂರಿತವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ಸಂದರ್ಭ ಗ್ರಾಮಸ್ಥರು ತಡೆದು ಆಕ್ರೋಶ ಹೊರಹಾಕಿದ್ದರು.
ಅಲ್ಲದೇ ಸಾರ್ವಜಿಕರ ದೂರು ಆಧರಿಸಿ ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ದೇವರನಾವದಗಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಹರನಾಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ವೇಳೆ ಅಂದಾಜು 44900 ರೂ.ಮೌಲ್ಯದ ಆಹಾರ ಸಾಮಗ್ರಿಗಳನ್ನು ಬೇರೆ ಕಡೆಗೆ ಸಾಗಿಸುತ್ತಿರುವುದು ಸಾಬೀತಾಗಿದೆ. ಶಾಲೆಯಲ್ಲಿ ಆಹಾರ ಧಾನ್ಯ ಸ್ಟಾಕ್ ರಜಿಸ್ಟರ್ ಉದ್ದೇಶಪೂರ್ವಕವಾಗಿ ನಿರ್ವಹಣೆ ಮಾಡದೇ ಇರುವುದು ಮತ್ತು ಶಾಲೆಯಲ್ಲಿ ಯಾವುದೇ ಶೈಕ್ಷಣಿಕ ಚಟುವಟಿಕೆಗಳನ್ನು ಮಾಡದೇ ತರಗತಿಗಳನ್ನು ತೆಗೆದುಕೊಳ್ಳದೇ ಇರುವುದು ತಮ್ಮ ಸಂಪೂರ್ಣ ಕರ್ತವ್ಯ ಲೋ ಎದ್ದು ಕಾಣುತ್ತಿತ್ತು.
ಈ ಎಲ್ಲ ಕಾರಣಗಳಿಂದಾಗಿ ಮುಖ್ಯಶಿಕ್ಷಕ ಶರಣಪ್ಪ ದೊಡ್ಡಪ್ಪ ಬಿದನೂರನನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಹರನಾಳ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.