ವಿಜಯಪುರ ನೂತನ ಜಿಲ್ಲಾಧಿಕಾರಿ ವಿಜಯಮಹಾಂತೇಶ ಬಗ್ಗೆ ನಿಮಗೆಷ್ಟು ಗೊತ್ತು? ಸೈನಿಕ ಶಾಲೆಯ ವಿದ್ಯಾರ್ಥಿ ಸಾಧನೆಯ ಇಂಟ್ರೆಸ್ಟಿಂಗ್ ವಿವರ ಇಲ್ಲಿದೆ ನೋಡಿ…
ವಿಜಯಪುರ: ನೂತನ ಜಿಲ್ಲಾಧಿಕಾರಿ ಐಎಎಸ್ ಅಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ವಿಜಯಪುರ ಜಿಲ್ಲೆಗೆ ಬರುವ ಮುನ್ನವೇ ಅಪಘಾತದಿಂದಾಗಿ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದರು. ಇದೀಗ ಗುಣಮುಖರಾಗಿದ್ದು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.
ನಿರ್ಗಮಿತ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ಹೂಗುಚ್ಛ ನೀಡುವ ಮೂಲಕ ವಿಜಯ ಮಹಾಂತೇಶ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಅಧಿಕಾರ ಸ್ವೀಕರಿಸುತ್ತಿದ್ದಂತೆ ಜನಪ್ರತಿನಿಧಿಗಳನ್ನು, ಸುದ್ದಿಗಾರರನ್ನು ಆತ್ಮೀಯವಾಗಿ ಮಾತನಾಡಿಸಿ ಪರಿಚಯ ಮಾಡಿಕೊಂಡ ವಿಜಯಮಹಾಂತೇಶ ದಾನಮ್ಮನವರ ತಮ್ಮ ಹಿನ್ನೆಲೆ ಬಿಚ್ಚಿಟ್ಟ ಪರಿ ಕುತೂಹಲದಾಯಕ.
ಪತ್ನಿ, ಮಕ್ಕಳೊಂದಿಗೆ ಆಗಮನ:
ವಿಜಯ ಮಹಾಂತೇಶ ದಾನಮ್ಮನವರ ಅವರು ತಮ್ಮ ಪತ್ನಿ ಶ್ವೇತಾ ಮತ್ತು ಮಕ್ಕಳಾದ ತನ್ವಿ ಹಾಗೂ ವಿಹಾನ್ ಅವರೊಂದಿಗೆ ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಅವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದ್ದು ವಿಶೇಷವಾಗಿತ್ತು. ಇತ್ತೀಚಿಗಷ್ಟೇ ಸಂಭವಿಸಿದ ಕಾರು ಪಲ್ಟಿ ಅವಘಡದಿಂದ ಪಾರಾಗಿ ಬಂದ ವಿಜಯ ಮಹಾಂತೇಶ ಅವರು, ಚಿಕಿತ್ಸೆ ಪಡೆದುಕೊಂಡು, ವಿಜಯಪುರಕ್ಕೆ ಆಗಮಿಸಿ ಜಿಲ್ಲಾಧಿಕಾರಿಯವರ ಆಸನದಲ್ಲಿ ಕೂಡುತ್ತಿದ್ದಂತೆ ಅವರ ಪತ್ನಿ ಮತ್ತು ಮಕ್ಕಳ ಮೊಗದಲ್ಲಿ ಸಂತಸ ಕಂಡುಬಂದಿತು.
ಅಪಾರ ಅನುಭವ:
ಮೂಲತಃ ಗದಗ ಜಿಲ್ಲೆಯವರಾದ ವಿಜಯ ಮಹಾಂತೇಶ ಅವರು 2013ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದಾರೆ. ಈ ಮೊದಲು ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಯಾಗಿ, ದಾವಣಗೆರೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ, ಉತ್ತರ ಕನ್ನಡ, ಬಾಗಲಕೋಟ, ಬಳ್ಳಾರಿ ಜಿಲ್ಲೆಗಳಲ್ಲಿ ಅಪರ ಜಿಲ್ಲಾಧಿಕಾರಿಯಾಗಿ, ಬೆಳಗಾವಿ ಮತ್ತು ಕಾರವಾರ ಜಿಲ್ಲೆಗಳಲ್ಲಿ ಸಹಾಯಕ ಆಯುಕ್ತರಾಗಿ, ಹುಬ್ಬಳ್ಳಿ ಹೆಸ್ಕಾಂ ಜನರಲ್ ಮ್ಯಾನೇಜರ್ ಆಗಿ, ಧಾರವಾಡ ಕೆಐಎಡಿಬಿಯ ವಿಶೇಷ ಭೂಸ್ವಾಧಿನಾಧಿಕಾರಿಯಾಗಿ, ರಾಜ್ಯ ಶಿಷ್ಟಾಚಾರ ಇಲಾಖೆಯ ಉಪ ಕಾರ್ಯದರ್ಶಿ ಸೇರಿದಂತೆ ಇನ್ನೂ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅಪಾರ ಅನುಭವ ಹೊಂದಿದ್ದಾರೆ.
ವಿಜಯಪುರ ಜಿಲ್ಲೆಯ ಸೈನಿಕ ಶಾಲೆಯ ವಿದ್ಯಾರ್ಥಿಯಾಗಿರುವ ವಿಜಯಮಹಾಂತೇಶ ಇಲ್ಲಿನ ಜನರ ಬಗ್ಗೆ, ಸಮಸ್ಯೆಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿದ್ದಾರೆ.