ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಚುರುಕು, ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಡಿಸಿ ದಂಪತಿ
ಸರಕಾರ್ ನ್ಯೂಸ್ ವಿಜಯಪುರ
ತೀವ್ರ ಕುತೂಹಲ ಕೆರಳಿಸಿರುವ ಮಹಾನಗರ ಪಾಲಿಕೆ ಚುನಾವಣೆಗೆ ಶುಕ್ರವಾರ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ನಗರದ ಜನತೆ ಅತ್ಯಂತ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ನಗರದ 35 ವಾರ್ಡ್‌ಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಒಟ್ಟು 174 ಅಭ್ಯರ್ಥಿಗಳು ಕಣದಲ್ಲಿದ್ದು, ಇಂದು ಮತದಾರ ಪ್ರಭು ಅಭ್ಯರ್ಥಿಗಳ ಹಣೆ ಬರಹ ಬರೆಯಲು ಅತ್ಯಂತ ಉತ್ಸುಕನಾಗಿದ್ದು ಕಂಡು ಬಂದಿತು.
ಶಾಲೆ-ಕಾಲೇಜ್, ಸರ್ಕಾರಿ ಕಚೇರಿಗಳು ಸೇರಿ ವಿವಿಧೆಡೆ ಒಟ್ಟು 303 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಆರಂಭಗೊಂಡಿತು. ಜನರು ಚಳಿ ಲೆಕ್ಕಿಸದೆ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು.
ಜಿಲ್ಲೆಯ ಚುನಾವಣೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ. ವಿಜಯ ಮಾಹಾಂತೇಶ ದಾನಮ್ಮನವರ ಮತ್ತು ಅವರ ಪತ್ನಿ ಶ್ರೀಮತಿ ಶ್ವೇತಾ ದಾನಮ್ಮನವರ ಕುಟುಂಬ ಸಮೇತರಾಗಿ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ದರಬಾರ ಶಾಲೆಯಲ್ಲಿ ಸ್ಥಾಪಿಲಾಗಿರುವ 219 ರ ಮತಗಟ್ಟೆಗೆ ತೆರಳಿ ತಮ್ಮ ಮತದಾನ ಹಕ್ಕನ್ನು ಚಲಾಯಿಸುವ ಮೂಲಕ ಮತದಾನ ಮಹತ್ವ ಸಾರಿದರು.
ಮತದಾನ ಒಂದು ಪವಿತ್ರವಾದ ಕರ್ತವ್ಯ, ಮತದಾನ ನಮ್ಮ ಹಕ್ಕು ಹಾಗೂ ಕರ್ತವ್ಯ ಕೂಡಾ. ನಮ್ಮ ಮತ ಪ್ರಗತಿಗೆ ಬರೆಯುವ ಮುನ್ನುಡಿ. ಮತದಾನ ನಮ್ಮೆಲ್ಲರ ಜವಾಬ್ದಾರಿಯೂ ಸಹ ಆಗಿದೆ ಎಂದು ಹೇಳಿದರು.