ನಮ್ಮ ವಿಜಯಪುರ

ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಡಿಸಿ ಖಡಕ್‌ ಸೂಚನೆ

ಸರಕಾರ್‌ ನ್ಯೂಸ್‌ ವಿಜಯಪುರ

ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲಿ ಅನಧಿಕೃತವಾಗಿ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಪಿಸಿಪಿಎನ್‍ಡಿಟಿ ಜಿಲ್ಲಾ ಮಟ್ಟದ ನೀರಿಕ್ಷಣಾ ಮತ್ತು ಮೇಲ್ವಿಚಾರಣಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡುವುದನ್ನು ನಿಷೇಧಿಸಲಾಗಿದ್ದು, ಕಾನೂನಿನ ರಿತ್ಯ ಭ್ರೂಣ ಲಿಂಗ ಪತ್ತೆ ಮಾಡುವುದು ಅಪರಾಧವಾಗಿದ್ದು, ಈ ಪ್ರಕರಣಗಳು ಕಂಡು ಬಂದಲ್ಲಿ ಅಂತಹ ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರಗಳನ್ನು ಸೀಜ್ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳಿಗೆ ಪ್ರತಿ ತಿಂಗಳು ಭೇಟಿ ನೀಡಿ ಕಾಯ್ದೆ ಉಲ್ಲಂಘನೆಯಾದಂತೆ ನೋಡಿಕೊಳ್ಳಬೇಕು. ಕಾರ್ಯನಿರ್ವಹಿಸುತ್ತಿರುವ ಸ್ಕ್ಯಾನಿಂಗ್ ಕೇಂದ್ರಗಳು ಕಡ್ಡಾಯವಾಗಿ ನೋಂದಣಿಯಾಗಿರಬೇಕು. ನಿಯಮಾನುಸಾರ ಸ್ಕ್ಯಾನಿಂಗ್ ಕೇಂದ್ರಗಳು ನವೀಕರಣಗೊಳ್ಳಬೇಕು. ನವೀಕರಣಕ್ಕಾಗಿ ಒಂದು ತಿಂಗಳ ಮುಂಚಿತವಾಗಿ ಅರ್ಜಿ ಸಲ್ಲಿಸಿರಬೇಕು. ನವೀಕರಣದ ಅರ್ಜಿಗಳನ್ನು ಜಿಲ್ಲಾ ಮಟ್ಟದ ಸಮಿತಿಯಲ್ಲಿ ಮಂಡಿಸಿ, ಈ ಕುರಿತು ಕೂಲಂಕೂಷವಾಗಿ ಪರಿಶೀಲನೆ ನಡೆಸಿದ ತರುವಾಯ ಅಗತ್ಯ ಕ್ರಮ ಕೈಗೊಳ್ಳಬೇಕು. ಸ್ಕ್ಯಾನಿಂಗ್ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಲೈಸನ್ಸ್, ಕೇಂದ್ರದ ವವಸ್ಥೆ , ಸ್ಕ್ಯಾನಿಂಗ್ ಯಂತ್ರ ತಪಾಸಣೆ ನಡೆಸುವಂತೆ ಅವರು ಸೂಚನೆ ನೀಡಿದರು.

ಪಿಸಿಪಿಎನ್‍ಡಿಟಿ ಕಾಯ್ದೆಗೆ ಸಂಬಂಧಿಸಿದ ಎಇಸಿ ಪೋಸ್ಟರ್‍ಗಳನ್ನು ಮುದ್ರಿಸಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧ ಆಯ್ದ ಸ್ಥಳಗಳಲ್ಲಿ ಪ್ರಚುರ ಪಡಿಸಿ ಸಾರ್ವಜನಿಕರಿಗೆ ಈ ಕುರಿತು ತಿಳುವಳಿಕೆ-ಜಾಗೃತಿ ಮೂಡಿಸಬೇಕು. ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಒಂದೇ ನಮೂನೆಯಲ್ಲಿ ಎಫ್-ಫಾರ್ಮಗಳ ನಿರ್ವಹಣೆಗೆ ಸೇರಿದಂತೆ ಜಿಲ್ಲೆಯಲ್ಲಿ ಭ್ರೂಣ ಲಿಂಗ ಪತ್ತೆ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಶ ಚವ್ಹಾಣ, ಡಾ.ಕೆ.ಡಿ.ಗುಂಡಬಾವಡಿ, ಡಾ.ಎಸ್.ಆರ್.ಮುದನೂರ, ಡಾ.ಎಲ್.ಎಚ್.ಬಿದರಿ, ಡಾ.ಪಿ.ಬಿ.ದೇವಮಾನೆ, ಡಾ.ಎಂ.ಎಂ.ಪಾಟೀಲ, ಡಾ.ಎಸ್.ಎಸ್.ಕಲ್ಯಾಣ ಶೆಟ್ಟಿ, ಸ್ತ್ರೀರೋಗ ತಜ್ಞ ಟಿ.ಪಿ.ನಾಯ್ಡು, ಕಾನೂನು ಸಲಹೆಗಾರ ತುಳಸಿರಾಮ ಸೂರ್ಯವಂಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!